ನಾಗರಿಕರ ಮನಸ್ಥಿತಿ ಬದಲಾದರೆ ಪ್ಲಾಸ್ಟಿಕ್ ಮುಕ್ತ ಜಿಲ್ಲೆಯಾಗಲು ಸಾಧ್ಯ: ಜಿಲ್ಲಾಧಿಕಾರಿ ಪ್ರಿಯಾಂಕ
ಗಾಂಧಿ ಜಯಂತಿ ಕಾರ್ಯಕ್ರಮ

ಉಡುಪಿ, ಅ. 2: ಶಿಕ್ಷಣ, ವೈದ್ಯಕೀಯ ಕ್ಷೇತ್ರದಲ್ಲಿ ರಾಜ್ಯಕ್ಕೆ ಮಾದರಿಯಾಗಿ ರುವ ಉಡುಪಿ ಪ್ಲಾಸ್ಟಿಕ್ ಮುಕ್ತ ಜಿಲ್ಲೆಯಲ್ಲೂ ಮಾದರಿಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ನಾಗರಿಕರ ಮನಸ್ಥಿತಿ ಬದಲಾಗಬೇಕಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಪಂ, ಉಡುಪಿ ನಗರಸಭೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಅಜ್ಜರ ಕಾಡು ಗಾಂಧಿ ಪಾರ್ಕ್‌ನಲ್ಲಿ ಮಂಗಳವಾರ ಆಯೋಜಿಸಲಾದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾವಹಿಸಿ ಅವರು ಮಾತನಾಡುತಿದ್ದರು.
ನಗರವಾಸಿಗಳ ಸಂಖ್ಯೆ ವೃದ್ಧಿಯಾಗುತ್ತಿದ್ದು, ದಿನಕ್ಕೆ 75 ಟನ್ ಕಸ ಸಂಗ್ರಹ ವಾಗುತ್ತಿದೆ. ಇದರಿಂದ ಈ ಕಸಗಳ ವಿಲೇವಾರಿ ಕಷ್ಟವಾಗುತ್ತಿದೆ. ಆದುದರಿಂದ ಹಸಿಕಸವನ್ನು ಮನೆಯಲ್ಲೇ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಅಪಾರ್ಟ್‌ಮೆಂಟ್ ಗಳಲ್ಲಿ ಬಯೋಬಿನ್/ಬಯೋಗ್ಯಾಸ್‌ಗಳನ್ನು ಅಳವಡಿಸಿಕೊಳ್ಳುವ ಮೂಲಕ ಕಸವನ್ನು ತಗ್ಗಿಸುವ ಕೆಲಸಕ್ಕೆ ಮುಂದಾಗಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಮಹಾತ್ಮ ಗಾಂಧಿ ಸ್ವಚ್ಛತೆಗೆ ಆದ್ಯತೆ ನೀಡಿದ್ದು, ಗಾಂಧೀಜಿ ಆಶಯದಂತೆ ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ಸ್ವಚ್ಛ ಭಾರತ್ ಸಂಕಲ್ಪ ಪರಿಪೂರ್ಣವಾಗಬೇಕಾದರೆ ಮನೆ, ಊರಿನ ಸ್ವಚ್ಛತೆಯ ಜತೆಗೆ ಮನಸ್ಸು ಮತ್ತು ಮನಸ್ಥಿತಿಯನ್ನು ಸ್ವಚ್ಛವಾಗಿ ಇಡಬೇಕಾಗಿದೆ ಎಂದು ತಿಳಿಸಿದರು.
ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷ ಶಯನ ಕಾರಿಂಜ ಉಪಸ್ಥಿತರಿದ್ದರು.
ಗಾಂಧೀಜಿ ಕುರಿತು ವಾರ್ತಾ ಮತ್ತು ಸಾರ್ವಜನಿಕಕ ಸಂಪರ್ಕ ಇಲಾಖೆ ಮುದ್ರಿಸಿದ ವಿಶೇಷ ಜನಪದ ಸಂಚಿಕೆ ಮತ್ತು ಕಿರು ಪುಸ್ತಕವನ್ನು ಬಿಡುಗಡೆಗೊಳಿಸ ಲಾಯಿತು. ನಿವೃತ್ತ ಶಿಕ್ಷಕ ಪುಂಡಲೀಕ ಮರಾಠೆ ಗಾಂಧೀ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಪೌರಾಯುಕ್ತ ಜೆ.ಸಿ.ಜನಾರ್ದನ ಸ್ವಾಗತಿಸಿದರು. ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ವಂದಿಸಿದರು. ಪ್ರಕಾಶ್ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಕುಮಾರ್ ಗಂಗೊಳ್ಳಿ ತಂಡದಿಂದ ಗಾಂಧಿ ಭಜನೆ, ಗಾಂಧೀಜಿಯ ಅಪರೂಪದ ಛಾಯಾಚಿತ್ರ ಪ್ರದರ್ಶನ ಮತ್ತು ಗಾಂಧಿ ಕುರಿತ ಕಿರುಚಿತ್ರ ಪ್ರದರ್ಶನ ನಡೆಯಿತು.







