ಹೈಸ್ಕೂಲ್ ವಿದ್ಯಾರ್ಥಿನಿಯ ಮಾನಭಂಗಕ್ಕೆ ಯತ್ನ: ಇಬ್ಬರ ಸೆರೆ
ಮೂಡುಬಿದಿರೆ, ಅ. 2: ಶಾಲೆಬಿಟ್ಟು ಮನೆಗೆ ತೆರಳುತ್ತಿದ್ದ ಹೈಸ್ಕೂಲ್ ವಿದ್ಯಾರ್ಥಿನಿಯೋರ್ವಳನ್ನು ಮಾನಭಂಗಕ್ಕೆ ಯತ್ನಿಸಿದ ಘಟನೆ ಬೆಳುವಾಯಿಯಲ್ಲಿ ಸೋಮವಾರ ಸಂಜೆ ನಡೆದಿದ್ದು, ಘಟನೆಗೆ ಸಂಬಂಧಿಸಿ ಕೊಪ್ಪಳ ಜಲ್ಲೆ ಕುಷ್ಠಗಿ ತಾಲೂಕಿನ ಹನುಮಂತಪ್ಪ (24) ಹಾಗೂ ಆತನ ಸ್ನೇಹಿತ ಆನಂದ (22) ಎಂಬವರನ್ನು ಪೊಲೀಸರು ಫೋಕ್ಸ್ ಕಾಯ್ದೆಯಡಿ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
9ನೇ ತರಗತಿಯ ವಿದ್ಯಾರ್ಥಿನಿ ಸೋಮವಾರ ಸಂಜೆ ಶಾಲೆ ಬಿಟ್ಟು ಬೆಳುವಾಯಿ ಮೂಡಾಯಿಕಾಡು-ಜಂಗದಬೆಟ್ಟು ರಸ್ತೆಯಲ್ಲಿ ಒಬ್ಬಂಟಿಯಾಗಿ ನಡೆದು ಕೊಂಡು ಹೋಗುತ್ತಿದ್ದಾಗ ಬೈಕ್‍ನಲ್ಲಿ ಹಿಂಬಾಲಿಸಿಕೊಂಡು ಬಂದ ಆರೋಪಿಗಳಿಬ್ಬರು ದಾರಿ ಕೇಳುವ ನೆಪದಲ್ಲಿ ಬಾಲಕಿಯ ಮೈಮೇಲೆ ಕೈಹಾಕಿ ಮಾನಭಂಗಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಬಾಲಕಿಯ ಬೊಬ್ಬೆ ಕೇಳಿ, ಹತ್ತಿರದಲ್ಲೇ ಕೆಲಸ ಮಾಡುತ್ತಿದ್ದ ಆಕೆಯ ಸಂಬಂಧಿಕರು ನೆರವಿಗೆ ಧಾವಿಸಿ ಬಂದಾಗ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ನಂತರ ಸ್ಥಳೀಯರು ಬೆನ್ನಟ್ಟಿ ಆರೋಪಿಗಳನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಕೊಪ್ಪಳ ಜಿಲ್ಲೆಯವರಾದ ಈ ಯುವಕರು ಬೆಳುವಾಯಿ ಪರಿಸರದಲ್ಲಿ ಹಲವು ಸಮಯಗಳಿಂದ ಕೂಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.





