ಬೆಂಗಳೂರು: ರೌಡಿಗಳಿಗೆ ಎಚ್ಚರಿಕೆ ನೀಡಿದ ಪೊಲೀಸರು
ಬೆಂಗಳೂರು, ಅ.2: ಕೊಲೆ ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಗರ ವ್ಯಾಪ್ತಿಯ 500ಕ್ಕೂ ಅಧಿಕ ರೌಡಿಗಳನ್ನು ಸಿಸಿಬಿ ಕಚೇರಿಗೆ ಕರೆತಂದು ವಿಚಾರಣೆಗೊಳಪಡಿಸಿ, ಎಚ್ಚರಿಕೆ ನೀಡಿದರು.
ದಾಳಿಯ ವೇಳೆ ಕೆಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಇಲ್ಲಿಯವರೆಗೆ ಸುಮಾರು 500ಕ್ಕೂ ರೌಡಿಗಳ ಮೇಲೆ ದಾಳಿ ನಡೆಸಲಾಗಿದ್ದು, ಅವರನ್ನೆಲ್ಲಾ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಮಂಗಳವಾರ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನೇತೃತ್ವದಲ್ಲಿ, ರೌಡಿಗಳ ಪರೇಡ್ ನಡೆಸಿ, ರೌಡಿಗಳ ಚಟುವಟಿಕೆಗಳು, ಅವರ ಉದ್ಯೋಗ, ವಾಸಿಸುವ ಸ್ಥಳ, ಅವರ ಬಳಿ ದೊರೆತಿರುವ ವಸ್ತುಗಳ ಪರಿಶೀಲನೆ ನಡೆಸಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ರೌಡಿಗಳನ್ನು ಬಂಧಿಸಲಾಗಿದೆ. ಕೆಲವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗಿದೆ. ಪೆರೇಡ್‌ನಲ್ಲಿ ಭಾಗವಹಿಸುವ ರೌಡಿಗಳಲ್ಲಿ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದೆ, ರೌಡಿ ಚಟುವಟಿಕೆಗಳನ್ನು ನಡೆಸದೆ, ಉತ್ತಮ ಜೀವನ ನಡೆಸುತ್ತಿರುವವರನ್ನು ರೌಡಿಪಟ್ಟಿಯಿಂದ ಕೈಬಿಡಲು ಪ್ರಯತ್ನಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದರು.





