ಗಾಂಧೀಜಿ ಕಂಡ ಗ್ರಾಮ ಸ್ವರಾಜ್ ಇಂದು ಭ್ರಷ್ಟಾಚಾರದಿಂದ ಕೂಡಿದೆ: ಮಾಜಿ ಸಭಾಪತಿ ಕೆ.ಆರ್.ಪೇಟೆ ಕೃಷ್ಣ

ಮೈಸೂರು,ಅ.2: ಮಹಾತ್ಮ ಗಾಂಧೀಜಿ ಕಂಡ ಗ್ರಾಮ ಸ್ವರಾಜ್ ಇಂದು ಭ್ರಷ್ಟಾಚಾರದಿಂದ ಕೂಡಿದ್ದು, ಕಳ್ಳದಾರಿಯಲ್ಲಿ ಸಂಪಾದಿಸಿದವರು ಮತದಾರರನ್ನು ಕೊಂಡು ಕೊಂಡು ರಾಜರಾಗುತ್ತಿದ್ದಾರೆ ಎಂದು ಕರ್ನಾಟಕ ವಿಧಾನಸಭೆ ಮಾಜಿ ಸಭಾಪತಿ ಕೆ.ಆರ್.ಪೇಟೆ ಕೃಷ್ಣ ಆತಂಕ ವ್ಯಕ್ತಪಡಿಸಿದರು.
ಕಲಾಮಂದಿರದ ಮನೆಯಂಗಳದಲ್ಲಿ ಮಂಗಳವಾರ ದೇಸಿರಂಗ ಸಾಂಸ್ಕೃತಿಕ ಸಂಸ್ಥೆ ಹಮ್ಮಿಕೊಂಡಿದ್ದ ಗಾಂಧಿ ಮತ್ತು ಪ್ರಗತಿಪರ ಚಿಂತನೆ ಕುರಿತ ವಿಚಾರ ಸಂಕಿರಣ ಮತ್ತು ಸಂವಾದ, ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗಾಂಧೀಜಿ ಅವರಲ್ಲಿದ್ದ ಆದರ್ಶಗಳು ಇಂದಿನವರಲ್ಲಿಲ ಕಾಣುತ್ತಿಲ್ಲ, ಗ್ರಾಮ ಪಂ. ಮಟ್ಟದಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಜನರ ಕೈಗೆ ಅಧಿಕಾರ ಸಿಗಬೇಕು ಎಂದು ಕೊಂಡಿದ್ದ ಗಾಂಧೀಜಿ ಅವರ ಕನಸು ನಶಿಸಿಹೋಗಿದೆ. ಬಹಳ ಬೇಗ ಹಣ ಮಾಡಬೇಕೆಂಬ ಕನಸು ಕಟ್ಟಿಕೊಂಡವರೆ ಚುನಾಯಿತರಾಗುತಿದ್ದಾರೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂಬೇಡ್ಕರ್ ಎಲ್ಲರಿಗೂ ಒಂದು ಮತ ದೊರಕುವಂತೆ ಮಾಡಿದರು. ಆದರೆ ಮತ ಇಂದು ಶಾಪವಾಗಿದೆ. ಶೇ.70 ಭಾಗದ ಓಟುಗಳನ್ನು ಮಾರಿಕೊಳ್ಳುತಿದ್ದಾರೆ. ಕಳ್ಳದಾರಿಯಲ್ಲಿ ಸಂಪಾದನೆ ಮಾಡಿರುವವರು ಮತದಾರರನ್ನು ಕೊಂಡು ಕೊಂಡು ರಾಜರಾಗುತ್ತಿದ್ದಾರೆ. ಲೂಟಿಕೋರರನ್ನು ರಾಜರನ್ನಾಗಿ ಆಯ್ಕೆಮಾಡುತ್ತಿರುವುದು ನಮ್ಮ ದುರ್ಧೈವ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಂತಕಿ ಪ್ರೊ.ಆರ್.ಇಂದಿರಾ ವಹಿಸಿದ್ದರು. ಪ್ರೊ.ಅರವಿಂದ ಮಾಲಗತ್ತಿ ಪುಸ್ತಕ ಬಿಡುಗಡೆ ಮಾಡಿದರು. ದೇಸಿರಂಗ ಸಾಂಸ್ಕೃತಿ ಸಂಸ್ಥೆಯ ಅಧ್ಯಕ್ಷ ಜನಮನ ಕೃಷ್ಣ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಂತರ ನಡೆದ ಸಂವಾದದಲ್ಲಿ ಬಿ.ಮಹೇಶ್ ಹರವೆ, ಎಂ.ಕಲೀಮ್ ಅಹ್ಮದ್, ಡಾ.ಎಸ್.ನರೇಂದ್ರಕುಮಾರ್, ಎಂ.ಎಫ್.ಕಲೀಮ್, ಮೀನಾ ಮೈಸುರು, ಟಿ.ಸತೀಶ್ ಜವರೇಗೌಡ, ಡಾ.ಸಿ.ಸುರೇಶ್ ಡಾ.ಮ.ಪು.ಪೂರ್ಣಾನಂದ, ಮಂಜುನಾಥ್ ಲತಾ, ಎಂ.ಜಿ.ಮಂಜುಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.







