ಗಾಂಧೀಜಿ ಮತ್ತು ಅಂಬೇಡ್ಕರ್ ಅವರಲ್ಲಿ ವೈಚಾರಿಕ ಭಿನ್ನಾಭಿಪ್ರಾಯಗಳಿದ್ದವು: ಪ್ರೊ.ಅರವಿಂದ ಮಾಲಗತ್ತಿ

ಮೈಸೂರು,ಅ.2: ಗಾಂಧೀಜಿ ಗ್ರಾಮಸ್ವರಾಜ್‍ಗೆ ಹೆಚ್ಚು ಒತ್ತು ಕೊಟ್ಟರೆ, ಅಂಬೇಡ್ಕರ್ ನಗರೀಕರಣಕ್ಕೆ ಹೆಚ್ದು ಒತ್ತುಕೊಡುತ್ತಿದ್ದರು. ಹಾಗಾಗಿ ಗಾಂಧೀಜಿ ಮತ್ತು ಅಂಬೇಡ್ಕರ್ ಅವರಲ್ಲಿ ವೈಚಾರಿಕ ಭಿನ್ನಾಭಿಪ್ರಾಯಗಳಿದ್ದವು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹಾಗೂ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಹೇಳಿದರು.
ನಗರದ ಕಲಾಮಂದಿರದ ಮನೆಯಂಗಳದಲ್ಲಿ ಮಂಗಳವಾರ ಆಯೋಜಿಸಿದ್ದ ಗಾಂಧಿ ಮತ್ತು ಪ್ರಗತಿಪರ ಚಿಂತನೆ ವಿಚಾರ ಸಂಕಿರಣ ಮತ್ತು ಸಂವಾದದಲ್ಲಿ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಗಾಂಧೀಜಿ ಅವರ ಚಿಂತನೆ ಬೇರೆ, ಅಂಬೇಡ್ಕರ್ ಅವರ ಚಿಂತನೆ ಬೇರೆ, ಗಾಂಧೀಜಿ ಚಿಂತನೆ ಆಯಾ ಕಾಲಘಟಕ್ಕೆ ಮತ್ತು ಸಮಯಕ್ಕೆ ತಕ್ಕಂತೆ ಇದ್ದರೆ. ಅಂಬೇಡ್ಕರ್ ಅವರು ಸಂಶೋಧನಾ ಕ್ರಮದ ಚಿಂತನೆಗಳನ್ನು ಅನುಸರಿಸುತ್ತಿದ್ದರು. ಯಾವುದೇ ಒಂದು ವಿಚಾರವನ್ನು ಅಂಬೇಡ್ಕರ್ ಶೋಧಿಸಿ ನಂತರ ತೀರ್ಮಾನ ಮಾಡುತಿದ್ದರು. ಗಾಂಧೀಜಿ ಅವರು ಹೇಳಿದ ಮಾತುಗಳು ಆಯಾ ಕಾಲಘಟಕ್ಕೆ ತಕ್ಕತಂತೆ ಇರುತ್ತಿತ್ತು. ಸಮಯಕ್ಕೆ ತಕ್ಕಂತೆ ಬದಲಾಗುತ್ತಿದ್ದರು. ಹಾಗಾಗಿ ಅವರ ಚಿಂತನೆಗಳು ಪ್ರಸ್ತುತ ಎನ್ನಲು ಸಾಧ್ಯವಿಲ್ಲ, ಆ ಸಂದರ್ಭದಲ್ಲಿ ಎಲ್ಲರ ಚಿಂತನೆಗಳು ಒಂದಲ್ಲ ಒಂದು ಲೋಪದಿಂದ ಕೂಡಿರುತ್ತಿದ್ದವು. ಅವರ ಕಾಲದಲ್ಲಿ ಅದು ಪ್ರಸ್ತುತವಾಗಿರುತ್ತಿತ್ತು ಎಂದು ಅಭಿಪ್ರಾಯಿಸಿದರು.
ಗಾಂಧೀಜಿ ಗ್ರಾಮಸ್ವರಾಜ್‍ಗೆ ಒತ್ತು ನೀಡಿದರೆ ಅಂಬೇಡ್ಕರ್ ನಗರೀಕರಣಕ್ಕೆ ಒತ್ತು ನೀಡುತಿದ್ದರು. ಕಾರಣ, ಗ್ರಾಮಗಳು ಮೌಢ್ಯತೆಯನ್ನು ಹೆಚ್ಚು ಬಿಂಬಿಸುತ್ತವೆ. ಆ ಕ್ರಮದ ಆಲೋಚನೆಗಳು ಹೆಚ್ಚುತ್ತವೆ ಎಂಬ ಕಾರಣಕ್ಕೆ ವಿರೋಧಿಸುತ್ತಿದ್ದರು ಎಂದು ಹೇಳಿದರು.





