ಆಟವಾಡುತ್ತಿದ್ದ ಪುತ್ರನ ಎದುರಲ್ಲೇ ತಂದೆಯ ಹತ್ಯೆ

ಹೊಸದಿಲ್ಲಿ, ಅ. 2: ಪುತ್ರ ಹಾಗೂ ಸೋದರಳಿಯ ಆಡುತ್ತಿರುವುದನ್ನು ನೋಡುತ್ತಿರುವ ಸಂದರ್ಭ 34 ವರ್ಷದ ವ್ಯಕ್ತಿಯನ್ನು ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದ ಘಟನೆ ಆಗ್ನೇಯ ದಿಲ್ಲಿಯಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ರೂಪೇಶ್ ಎಂದು ಗುರುತಿಸಲಾಗಿದೆ.
ರವಿವಾರ ಬೆಳಗ್ಗೆ 8.30 ಹಾಗೂ 8.40 ನಡುವೆ ಈ ಘಟನೆ ನಡೆದಿದೆ. ರೂಪೇಶ್ ಅವರು 12 ವರ್ಷದ ಪುತ್ರ ಹಾಗೂ ಸೋದರಳಿಯ ಆಟವಾಡುತ್ತಿರುವುದನ್ನು ನೋಡುತ್ತಿರುವ ಸಂದರ್ಭ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎಂದು ಸಹೋದರ ಉಮೇಶ್ ಹೇಳಿದ್ದಾರೆ. ರೂಪೇಶ್ ಅವರ ಮನೆಯ ಸಮೀಪ ಹಾದು ಹೋದ ದುಷ್ಕರ್ಮಿಗಳು ರೂಪೇಶ್ ಅವರ ಎದೆಗೆ ಗುಂಡು ಹಾರಿಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಆರೋಪಿಗಳು ಸಮೀಪದ ಕೊಳಗೇರಿಯವರಾಗಿರಬಹುದು ಎಂದು ಪೊಲೀಸ್ ಆಯುಕ್ತ (ಆಗ್ನೇಯ) ಚಿನ್ಮಯಿ ಬಿಸ್ವಾಸ್ ತಿಳಿಸಿದ್ದಾರೆ.
ರೂಪೇಶ್ ಅವರ ಮೃತದೇಹವನ್ನು ರಸ್ತೆಯಲ್ಲಿ ಇರಿಸಿ ಅವರ ಕುಟುಂಬ ಪ್ರತಿಭಟನೆ ನಡೆಸಿದೆ. ಹತ್ಯೆ ಆರೋಪಿಗಳು ಹಾಗೂ ಈ ಪ್ರದೇಶದಲ್ಲಿ ಮಾದಕ ವಸ್ತು ಸಾಗಾಟ ಮಾಡುತ್ತಿರುವವರು ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.





