ಉಡುಪಿ: ಅಮಾನತು ಆದೇಶ ಹಿಂಪಡೆಯಲು ದಸಂಸ ಆಗ್ರಹ
ಉಡುಪಿ, ಅ.3: ಕಾರ್ಕಳ ತಾಲೂಕು ಮುಡಾರು ಗ್ರಾಪಂನಲ್ಲಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ದಲಿತ ವರ್ಗದ ನೌಕರ ಶಿವರಾಜು ಎಂ. ಅವರನ್ನು ಗ್ರಾಪಂನ ಸ್ಥಳೀಯ ರಾಜಕಾರಣದ ಹಿನ್ನೆಲೆಯಲ್ಲಿ ಸುಳ್ಳು ಆರೋಪ ಹೊರಿಸಿ ಕ್ರಮಬದ್ದ ವಿಚಾರಣೆ ನಡೆಸದೇ ಅಮಾನತು ಮಾಡಿರುವ ಜಿಪಂ ಕ್ರಮವನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ತೀವ್ರವಾಗಿ ಖಂಡಿಸಿದೆ.
ಈ ಕಾನೂನು ಬಾಹಿರ ಅಮಾನತು ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಇಲ್ಲವಾದಲ್ಲಿ ಇದರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ದಸಂಸ ಎಚ್ಚರಿಕೆ ನೀಡಿದೆ.
ಶಿವರಾಜು ಎಂ. ಅವರು ಯಾವುದೇ ಕರ್ತವ್ಯಲೋಪ ಮಾಡದಿದ್ದರೂ, ಅವರ ಮೇಲೆ ಸುಳ್ಳು ದೂರನ್ನು ಸಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ಲೆಕ್ಕ ಸಹಾಯಕ ರಿಗೆ ನೋಟೀಸು ನೀಡಿ ಕ್ರಮಬದ್ಧ ವಿಚಾರಣೆ ನಡೆಸದೇ ಹಾಗೂ ಅವರ ಹೇಳಿಕೆಗೂ ಅವಕಾಶ ನೀಡದೇ ತಾಪಂ ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್ ಜಿಪಂಗೆ ಸುಳ್ಳು ವರದಿ ಸಲ್ಲಿಸಿ ಈ ಅಮಾನತಿಗೆ ಕಾರಣರಾಗಿದ್ದಾರೆ ಎಂದು ದಸಂಸ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದೆ.
ಶಿವರಾಜು ಅವರಿಗೆ ಕೇಶವ ಶೆಟ್ಟಿಗಾರ್ ಅವರು ನಿರಂತರವಾಗಿ ಮಾನಸಿಕ ಕಿರುಕುಳ ನೀಡುತಿದ್ದು, ಈ ಬಗ್ಗೆ ಪ.ಜಾತಿ-ಪ.ಪಂಗಡ ಆಯೋಗ, ಮಾನವ ಹಕ್ಕು ಆಯೋಗ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಲಾಗುವುದು ಎಂದು ದಸಂಸ ಹೇಳಿದೆ.
ಶಿವರಾಜು ಅವರ ಅಮಾನತು ಆದೇಶವನ್ನು ಕೂಡಲೇ ಹಿಂಪಡೆದು ಮುಡಾರು ಗ್ರಾಪಂ ಹಾಗೂ ತಾಪಂ ಕಾರ್ಯನಿರ್ವಹಣಾಧಿಕಾರಿಗಳ ದಲಿತ ವಿರೋಧಿ ಧೋರಣೆಯ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸಮಿತಿ ಆಗ್ರಹಿಸಿದೆ.







