ಕೇಂದ್ರದ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

ಬೆಂಗಳೂರು, ಅ.3: ಕೇಂದ್ರ ಸರಕಾರದ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿಗೆ ಕೇಂದ್ರ ಸರಕಾರದ ಷಡ್ಯಂತ್ರವೇ ಕಾರಣ ಎಂದು ಆರೋಪಿಸಿ ರಾಜ್ಯ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬುಧವಾರ ನಗರದ ಕಬ್ಬನ್ ರಸ್ತೆಯ ಎಚ್‌ಎಎಲ್ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು, ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಮೆರವಣಿಗೆ ಸಾಗಿದರು. ಬಳಿಕ ಆದಾಯ ತೆರಿಗೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಮುತ್ತಿಗೆಗೆ ಯತ್ನಿಸಿದಾಗ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಬಸವನಗೌಡ ಬಾದರ್ಲಿ, ಕೇಂದ್ರ ಸರಕಾರ ಜನಸಾಮಾನ್ಯರ ಸೇವೆ ಮಾಡುವ ಬದಲು ಅಂಬಾನಿ, ಅದಾನಿ ಮೊದಲಾದ ಶ್ರೀಮಂತರ ಪರ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಯುಪಿಎ ಸರಕಾರದ ಅವಧಿಯಲ್ಲಿ 560 ಕೋಟಿ ರೂ.ಗೆ ಖರೀದಿಸಿದ್ದ ಯುದ್ಧ ವಿಮಾನವನ್ನು ಮೋದಿ ಸರಕಾರ 1,600 ಕೋಟಿ ರೂ.ಗೆ ಖರೀದಿಸಲು ಮುಂದಾಗಿದೆ. ಲೋಕಸಭಾ ಚುನಾವಣೆ ವೇಳೆ ಕಪ್ಪ ನೀಡಿದ್ದ ಅಂಬಾನಿಗೆ ಪ್ರಧಾನಿ ಮೋದಿ ಈ ಮೂಲಕ ನೆರವಾಗಿದ್ದಾರೆ. ಹಾಗಾಗಿ ಈ ಅನೈತಿಕ ಒಪ್ಪಂದದ ಹೊಣೆಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಮೋದಿ ಸರಕಾರ ಆದಾಯ ತೆರಿಗೆ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ರಾಜಕೀಯ ಪ್ರೇರಿತವಾಗಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದರು.
ನಲಪಾಡ್‌ಗೆ ನೇತೃತ್ವ!
ಉದ್ಯಮಿ ಪುತ್ರ ವಿದ್ವತ್ ಮೇಲಿನ ಹಲ್ಲೆ ಆರೋಪ ಪ್ರಕರಣ ಸಂಬಂಧ ಬೆಂಗಳೂರು ನಗರ ಯುವ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ನಲಪಾಡ್‌ನನ್ನು 6 ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿ, ಅಂದಿನ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಆದೇಶಿಸಿದ್ದರು. ಆದರೆ, ಇಂದಿನ ಪ್ರತಿಭಟನೆಯಲ್ಲಿ ಈತನಿಗೆ ನೇತೃತ್ವ ನೀಡಲಾಗಿತ್ತು ಎನ್ನುವ ಮಾತುಗಳು ಕೇಳಿಬಂದಿದೆ.







