ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್
ಬೆಂಗಳೂರು, ಅ. 3: ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬುಧವಾರ ಪತ್ನಿ ಸಮೇತ ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.
ಮಂಗಳವಾರ ರಾತ್ರಿಯೇ ಕುಟುಂಬ ಸಮೇತರಾಗಿ ತಿರುಪತಿಗೆ ತೆರಳಿದ ಪರಮೇಶ್ವರ್ ಅವರು, ಬುಧವಾರ ಬೆಳಗ್ಗೆಯೇ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆ ಬಳಿಕ ಅಲ್ಲಿನ ಸುತ್ತಮುತ್ತಲಿನ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಮಧ್ಯಾಹ್ನ ನಗರಕ್ಕೆ ಹಿಂದಿರುಗಿದ್ದಾರೆ.
ಇತ್ತೀಚೆಗಷ್ಟೇ ಕಾರವಾರದ ದೇವಸ್ಥಾನವೊಂದಕ್ಕೆ ಭೇಟಿ ನೀಡಿದ್ದ ಪರಮೇಶ್ವರ್ ಅವರು, ಇದ್ದಕ್ಕಿದ್ದ ಹಾಗೆ ಸರಕಾರಿ ಕಾರ್ಯ-ಕಲಾಪಗಳನ್ನು ಬದಿಗಿರಿಸಿ ದೇವಸ್ಥಾನಕ್ಕೆ ಭೇಟಿ ನೀಡುವ ಪರಿಪಾಠವನ್ನು ರೂಢಿಸಿಕೊಂಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದ ದಿನದಿಂದ ನಾಲ್ಕು ತಿಂಗಳಲ್ಲಿ ಸುಮಾರು 60ಕ್ಕೂ ಹೆಚ್ಚು ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಇದೀಗ ಡಿಸಿಎಂ ಪರಮೇಶ್ವರ್ ಅವರ ದೇವರ ದರ್ಶನ ಆರಂಭಿಸಿರುವುದು ಸಾರ್ವಜನಿಕ ವಲಯದಲ್ಲಿ ಪರ-ವಿರೋಧ ಚರ್ಚೆಗೆ ಅವಕಾಶ ಕಲ್ಪಿಸಿದೆ.





