ವೇತನ ನೀಡಲು ಆಗ್ರಹಿಸಿ ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನೆ

ಬೆಂಗಳೂರು, ಅ.3: ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಶಾ ಕಾರ್ಯಕರ್ತೆಯರಿಗೆ ಬಾಕಿಯಿರುವ 5 ತಿಂಗಳ ನಿಗದಿತ ಮಾಸಿಕ ಪ್ರೋತ್ಸಾಹ ಧನ ನೀಡಬೇಕೆಂದು ಆಗ್ರಹಿಸಿ ಇಂದಿಲ್ಲಿ ಪ್ರತಿಭಟನೆ ನಡೆಸಲಾಯಿತು.
ಬುಧವಾರ ನಗರದ ಮೈಸೂರು ವೃತ್ತದ ಬಳಿ ಜಮಾಯಿಸಿದ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಸದಸ್ಯರು, ಮಾಸಿಕ ವೇತನ 18 ಸಾವಿರ ವೇತನ ನಿಗದಿಪಡಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ, ಕೈಗೆ ಸಂಬಳ ಸಿಕ್ಕಿ ಐದು ತಿಂಗಳಾಗಿದೆ. ಕೆಲಸಕ್ಕೆ ತಕ್ಕ ವೇತನವನ್ನು ಸರಕಾರ ನೀಡಿಲ್ಲ. ಇದರಿಂದ ಕಾರ್ಯಕರ್ತೆಯರು ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸರಕಾರ ನೀಡಿದ್ದ ಭರವಸೆಗಳು ಹಾಗೇ ಉಳಿದಿವೆ. ಹೀಗಾಗಿ, ನೊಂದು ಈಗ ಪುನಃ ಪ್ರತಿಭಟನೆ ಆರಂಭಿಸಿದ್ದೇವೆ. ವಿಧವೆಯರು, ವಿಚ್ಛೇದಿತರು, ಒಂಟಿ ಮಹಿಳೆಯರು ಮತ್ತು ಗಂಡನ ದುಡಿಮೆಯ ಬೆಂಬಲವಿಲ್ಲದೆ ಕುಟುಂಬ ನಿರ್ವಹಿಸುತ್ತಿರುವ ಮಹಿಳೆಯರಿದ್ದಾರೆ. ಅವರ ಕಷ್ಟಕ್ಕೆ ಸರಕಾರ ಸ್ಪಂದಿಸುತ್ತಿಲ್ಲ ಎಂದು ನುಡಿದರು.
ಮೇ ತಿಂಗಳಿನಿಂದ ಯಾರಿಗೂ ಸಂಬಳ ಕೊಟ್ಟಿಲ್ಲ. ಬಿಬಿಎಂಪಿ ಅಧಿಕಾರಿಗಳನ್ನು ಕೇಳಿದರೆ, ಬ್ಯಾಂಕ್ ಖಾತೆಯಲ್ಲಿ ತುಂಬಾ ತಪ್ಪುಗಳಿವೆ ಎಂದು ನೆಪ ಹೇಳುತ್ತಾರೆ. ಆಶಾ ನಿಧಿ ನೋಂದಣಿಯಲ್ಲಿ ಹಲವು ಸಮಸ್ಯೆಗಳಿವೆ. ಅವುಗಳನ್ನು ಸರಿಪಡಿಸಬೇಕು. ಅವರು ನಿರ್ವಹಿಸಿದ ಎಲ್ಲ ಕೆಲಸಗಳಿಗೆ ಪ್ರೋತ್ಸಾಹ ಒದಗಿಸಬೇಕೆಂದರು.







