ಮಹತ್ವದ ವಿಷಯಗಳಿದ್ದರೆ ಮಾತ್ರ ತುರ್ತು ವಿಚಾರಣೆ: ಮು.ನ್ಯಾ.ಗೊಗೋಯ್

ಹೊಸದಿಲ್ಲಿ,ಅ.3: ಪ್ರಕರಣಗಳ ತುರ್ತು ಉಲ್ಲೇಖ ಮತ್ತು ವಿಚಾರಣೆಗಳಿಗಾಗಿ ಮಾನದಂಡಗಳನ್ನು ನಿಗದಿಗೊಳಿಸಲಾಗುವುದು ಎಂದು ಭಾರತದ ನೂತನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದ ಬಳಿಕ ನಡೆಸಿದ ಮೊದಲ ಕಲಾಪದಲ್ಲಿ ತಿಳಿಸಿದರು.
ಯಾರನ್ನೋ ನೇಣಿಗೇರಿಸಲಾಗುತ್ತಿದೆ ಅಥವಾ ಮನೆಯಿಂದ ತೆರವುಗೊಳಿಸಲಾಗುತ್ತಿದೆ ಎಂಬಂತಹ ಗಂಭೀರ ವಿಷಯಗಳನ್ನು ಹೊರತುಪಡಿಸಿ ತುರ್ತು ವಿಚಾರಣೆಗಾಗಿ ಇತರ ಯಾವುದೇ ವಿಷಯವನ್ನು ಉಲ್ಲೇಖಿಸುವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕೆಲವು ಮಾನದಂಡಗಳ ಹೊಂದಾಣಿಕೆಯ ಅಗತ್ಯಕ್ಕೆ ಒತ್ತು ನೀಡಿದ ಅವರು,ಈ ಮಾನದಂಡಗಳು ನಿಗದಿಯಾಗುವವರೆಗೂ ಪ್ರಕರಣಗಳ ತುರ್ತು ಉಲ್ಲೇಖಗಳಿಗೆ ಅವಕಾಶವಿಲ್ಲ ಎಂದು ಹೇಳಿದರು. ಸದ್ಯ ಸರ್ವೋಚ್ಚ ನ್ಯಾಯಾಲಯವು ಇದಕ್ಕಾಗಿಯೇ ಪ್ರತಿದಿನ 20 ನಿಮಿಷಗಳನ್ನು ವ್ಯಯಿಸುತ್ತದೆ.
ನ್ಯಾ.ಗೊಗೋಯ್ ಅವರ ಈ ಪ್ರಕಟಣೆಯ ಮೊದಲ ಆಘಾತವುಂಟಾಗಿದ್ದು ವಕೀಲ ಮ್ಯಾಥ್ಯೂಸ್ ನೆಡುಂಪರ ಅವರಿಗೆ. ಮುಖ್ಯ ನ್ಯಾಯಮೂರ್ತಿಯಾಗಿದ್ದಕ್ಕೆ ತನ್ನನ್ನು ಅಭಿನಂದಿಸುವ ಅವರ ಬಯಕೆಗೆ ಗೊಗೋಯ್ ತಣ್ಣೀರೆರಚಿದರು. ಮುಂದಿನ ಆಘಾತ ತಟ್ಟಿದ್ದು ವಕೀಲ ಪ್ರಶಾಂತ ಭೂಷಣ್‌ಗೆ. ಅವರು ಕೆಲವು ಅಕ್ರಮ ವಲಸಿಗ ರೊಹಿಂಗ್ಯಾಗಳ ಗಡಿಪಾರಿನ ಕುರಿತು ತುರ್ತಾಗಿ ಉಲ್ಲೇಖಿಸಲು ಬಯಸಿದ್ದರು. ಆದರೆ ಅದೇನೇ ಇದ್ದರೂ ಅರ್ಜಿಯನ್ನು ಸಲ್ಲಿಸಿ ಮತ್ತು ಅದು ಲಿಸ್ಟ್‌ನಲ್ಲಿ ಸೇರುತ್ತದೆ ಎಂದು ಮು.ನ್ಯಾ.ಗೊಗೋಯ್ ತಿಳಿಸಿದರು.
ಜುಜುಬಿ ಕಾರಣಗಳಿಗೂ ಸಲ್ಲಿಕೆಯಾಗುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಅಂಗೀಕಾರಾರ್ಹವಲ್ಲ ಎಂದೂ ಅವರು ಹೇಳಿದರು.
ಬುಧವಾರ ಬೆಳಿಗ್ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ರಾಷ್ಟ್ರಪತಿ ಭವನದಲ್ಲಿ ನಡೆದ ಸಂಕ್ಷಿಪ್ತ ಸಮಾರಂಭಲ್ಲಿ 63ರ ಹರೆಯದ ನ್ಯಾ.ಗೊಗೋಯ್ ಅವರಿಗೆ ಭಾರತದ 46ನೇ ಮುಖ್ಯ ನ್ಯಾಯಾಧೀಶರಾಗಿ ಪ್ರಮಾಣ ವಚನವನ್ನು ಬೋಧಿಸಿದ್ದರು. ಅವರ ಅಧಿಕಾರಾವಧಿ ಸುಮಾರು 13 ತಿಂಗಳು ಆಗಿದ್ದು, 2019,ನ.17ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ.







