ಉಡುಪಿ ಉಸ್ತುವಾರಿ ಕಾರ್ಯದರ್ಶಿಯಿಂದ ಬೆಳೆ ಸಮೀಕ್ಷೆ ಪ್ರಗತಿ ಪರಿಶೀಲನೆ
ಉಡುಪಿ, ಅ.3: ಉಡುಪಿ ಜಿಲ್ಲೆಯಲ್ಲಿ ಈಗ ನಡೆಯುತ್ತಿರುವ 2018- 19ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯದ ಪ್ರಗತಿಯನ್ನು ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್ ಇಂದು ಪರಿಶೀಲಿಸಿದರು.
ಜಿಲ್ಲೆಯಲ್ಲಿ ಆಯ್ಕೆ ಮಾಡಲಾದ ಖಾಸಗಿ ನಿವಾಸಿಗಳ ಮೂಲಕ ಬೆಳೆ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದ್ದು, ಬುಧವಾರ ಮಹೇಶ್ವರ ರಾವ್ ಅವರು, ಉಪ್ಪೂರು ಮತ್ತು ಹಾವಂಜೆ ಗ್ರಾಮಗಳಿಗೆ ಭೇಟಿ ನೀಡಿ ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ ಕಾರ್ಯದ ಪ್ರಗತಿ ಪರಿಶೀಲಿಸಿ, ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ ಖಾಸಗಿ ನಿವಾಸಿಗಳು ಹಾಗೂ ಇಲಾಖಾಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು.
ಬೆಳೆ ಸಮೀಕ್ಷೆ ಕಾರ್ಯ ಸರಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದ್ದು, ಜಿಲ್ಲೆಯ ರೈತರು ಸಮೀಕ್ಷೆ ಕಾರ್ಯಕ್ಕೆ ಭೇಟಿ ನೀಡುವ ಖಾಸಗಿ ನಿವಾಸಿಗಳು ಹಾಗೂ ಅಧಿಕಾರಿಗಳಿಗೆ ಅಗತ್ಯ ಸಹಕಾರ ಹಾಗೂ ಮಾಹಿತಿಯನ್ನು ನೀಡಲು ಮನವಿ ಮಾಡಿದರು.
ಬೆಳೆ ಸಮೀಕ್ಷೆ ಕಾರ್ಯವನ್ನು ರೈತರ ಹಿತದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಾದ್ಯಂತ ಕೈಗೊಳ್ಳಲಾಗುತ್ತಿದ್ದು, ಪಾಕೃತಿಕ ವಿಕೋಪದ ಸಂದರ್ದಲ್ಲಿ ಬೆಳೆ ಹಾನಿ ಪರಿಹಾರ, ಬೆಂಬಲ ಬೆಲೆ ನಿಗದಿ, ವಿವಿಧ ಬೆಳೆಗಳ ಉತ್ಪಾದನೆ ಅಂದಾಜಿಸುವಿಕೆ, ರೈತಪರ ಯೋಜನೆಗಳನ್ನು ರೂಪಿಸಲು ಹಾಗೂ ಅನುಷ್ಠಾನ ಗೊಳಿಸಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.







