ಮೂಡುಬಿದಿರೆ: ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತನ ಕೊಲೆ; ಆರೋಪಿ ಸೆರೆ

ಮೂಡುಬಿದಿರೆ, ಅ. 3: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಸ್ನೇಹಿತರಿಬ್ಬರ ಮಧ್ಯೆ ನಡೆದ ಮಾತಿನ ಚಕಾಮಕಿಯಲ್ಲಿ ವ್ಯಕ್ತಿಯೋರ್ವ ಸ್ನೇಹಿತನನ್ನೇ ಕೊಲೆ ಮಾಡಿದ ಘಟನೆ ಶಿರ್ತಾಡಿಯಲ್ಲಿ ಮಂಗಳವಾರ ರಾತ್ರಿ ನಡೆದಿದ್ದು, ಬುಧವಾರ ಬೆಳಕಿಗೆ ಬಂದಿದೆ.
ಶಿರ್ತಾಡಿ ಚರ್ಚ್ ಶಾಲೆ ಬಳಿಯ ನಿವಾಸಿ ಶೇಖರ್ ಪೂಜಾರಿ (52) ಮೃತರು ಎಂದು ಗುರುತಿಸಲಾಗಿದೆ.
ಇವರು ಮೂಲತ: ಕೇರಳದವರಾಗಿದ್ದು ಮದುವೆ ಬಳಿಕ ಹಲವು ವರ್ಷಗಳಿಂದ ಶಿರ್ತಾಡಿಯಲ್ಲಿ ನೆಲೆಸಿದ್ದಾರೆ. ಕೊಲೆ ನಡೆಸಿದ ಆರೋಪಿ ಶೇಖರ್ ಅವರ ಸ್ನೇಹಿತ ಶಿರ್ತಾಡಿಯ ಜಯ ಮಡಿವಾಳ (42) ಎಂದು ತಿಳಿದುಬಂದಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಇವರಿಬ್ಬರು ಸ್ನೇಹಿತರಾಗಿದ್ದು, ಸೋಮವಾರ ರಾತ್ರಿ ಶೇಖರ್ ಪೂಜಾರಿ ಸ್ನೇಹಿತ ಜಯ ಮಡಿವಾಳ ಮನೆಗೆ ಬಂದಿದ್ದರು. ಅಲ್ಲಿ ಇಬ್ಬರು ಮದ್ಯ ಸೇವಿಸಿ ಊಟಕ್ಕೆ ತಯಾರಾಗಿದ್ದು, ಈ ಸಂದರ್ಭ ಇಬ್ಬರ ಮಧ್ಯೆ ಹಳೆ ವಿಷಯಕ್ಕೆ ಸಂಬಂಧಿಸಿ ಮಾತಿನ ವಾಗ್ವಾದ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಸಿಟ್ಟಿಗೆದ್ದ ಜಯ ಮಡಿವಾಳ ಮನೆಯಲ್ಲಿದ್ದ ಕತ್ತಿಯಿಂದ ಶೇಖರ ಪೂಜಾರಿಯ ಕುತ್ತಿಗೆ ಮತ್ತು ತಲೆಗೆ ಕಡಿದ ಎನ್ನಲಾಗಿದೆ. ಗಂಭೀರ ಗಾಯಗೊಂಡಿದ್ದ ಶೇಖರ ಪೂಜಾರಿ ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ಅರಿತ ಮೂಡುಬಿದಿರೆ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಈ ಸಂದರ್ಭ ಜಯ ಮಡಿವಾಳ ಘಟನಾ ಸ್ಥಳದಲ್ಲೇ ಮಲಗಿದ್ದು, ಆರೋಪಿಯನ್ನು ಬಂಧಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.







