ಮೈಸೂರು ದಸರಾ: ಸಿಎಂ, ಡಿಸಿಎಂ, ಸುಧಾಮೂರ್ತಿಗೆ ಅಧಿಕೃತ ಅಹ್ವಾನ ನೀಡಿದ ಜಿಲ್ಲಾಡಳಿತ

ಮೈಸೂರು,ಅ.3: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿಟಿ ದೇವೇಗೌಡ ಅವರು ಇಂದು ವಿಶ್ವವಿಖ್ಯಾತ ದಸರಾ 2018ರ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ಅಧಿಕೃತವಾಗಿ ಆಹ್ವಾನಿಸಿದರು.
ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರಿಗೆ ಹಾರ ಹಾಕಿ, ಶಾಲು ಹೊದಿಸಿ ಫಲತಾಂಬೂಲದೊಂದಿಗೆ ಆಮಂತ್ರಣ ಪತ್ರಿಕೆ ನೀಡಿ ಅಧಿಕೃತವಾಗಿ ದಸರಾ ಮಹೋತ್ಸವಕ್ಕೆ ಆಹ್ವಾನಿಸಿದರು. ಈ ಸಂದರ್ಭ ಸಚಿವ ಸಾ.ರಾ. ಮಹೇಶ್, ಜೆಡಿಎಸ್ ಜಿಲ್ಲಾಧ್ಯಕ್ಷ ಹೆಚ್.ವಿಶ್ವನಾಥ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಇದೇ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿಟಿ ದೇವೇಗೌಡರು ವಿಶ್ವವಿಖ್ಯಾತ ದಸರಾ ಮಹೋತ್ಸವ 2018ಕ್ಕೆ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರನ್ನುಅಧಿಕೃತವಾಗಿ ಆಹ್ವಾನಿಸಿದರು.
ಸುಧಾಮೂರ್ತಿಗೆ ಆಹ್ವಾನ: ವಿಶ್ವವಿಖ್ಯಾತ ದಸರಾ ಮಹೋತ್ಸವ ಅ.10ರಿಂದ 19ರವರೆಗೆ ನಡೆಯಲಿದ್ದು, ದಿನಗಣನೆ ಆರಂಭವಾಗಿದೆ. ದಸರಾ ಮಹೋತ್ಸವ ಉದ್ಘಾಟನೆಯನ್ನು ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕರಾದ ಸುಧಾಮೂರ್ತಿಯವರು ಉದ್ಘಾಟಿಸಲಿದ್ದಾರೆ.
ಸುಧಾಮೂರ್ತಿಯವರ ನಿವಾಸಕ್ಕೆ ತೆರಳಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಸರ್ಕಾರದ ಪರವಾಗಿ ದಸರಾ ಮಹೋತ್ಸವ ಉದ್ಘಾಟನೆಗೆ ಅಧಿಕೃತವಾಗಿ ಆಹ್ವಾನಿಸಿದ್ದಾರೆ. ಇಂದು ಬೆಳಿಗ್ಗೆ ಬೆಂಗಳೂರಿನ ಜಯನಗರದ ಇನ್ಫೋಸಿಸ್ ನ ಫೌಂಡೇಶನ್ ನೆರಳು ಕಚೇರಿಗೆ ಆಗಮಿಸಿದ ಸಚಿವರು ಸುಧಾಮೂರ್ತಿ ಅವರಿಗೆ ದಸರಾ ಮೈಸೂರು ಪೇಟ ತೊಡಿಸಿ, ಹಾರ ಹಾಕಿ, ಶಾಲು ಹೊದೆಸಿ ಗೌರವ ಅರ್ಪಿಸುವುದರ ಜೊತೆ, ಫಲತಾಂಬೂಲದ ಹಾಗೂ ಆಮಂತ್ರಣ ಪತ್ರಿಕೆ ನೀಡುವ ಮೂಲಕ ಅಧಿಕೃತವಾಗಿ ಆಹ್ವಾನಿಸಿದ್ದಾರೆ.
ಈ ಸಂದರ್ಭ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್, ಶಾಸಕ ಎಸ್.ಎ.ರಾಮದಾಸ್ ಸೇರಿದಂತೆ ಇತರ ಅಧಿಕಾರಿಗಳೂ ಇದ್ದರು.
ಸುಧಾಮೂರ್ತಿ ಮಾತನಾಡಿ, ನನಗೆ ದಸರಾ ಉದ್ಘಾಟನೆಗೆ ಆಗಮಿಸುತ್ತಿರುವುದು ತುಂಬಾ ಖುಷಿ ನೀಡಿದೆ. ಇದು ನಾಡಿನ ಹಬ್ಬ. 60ವರ್ಷಗಳ ಹಿಂದೆ ದಸರಾ ನೋಡಿದ್ದೆ. ಈಗ ಉದ್ಘಾಟನೆ ನೆರವೇರಿಸುತ್ತಿರುವುದು ನಿಜಕ್ಕೂ ನನ್ನ ಸೌಭಾಗ್ಯ ಎಂದರು. ಸಚಿವ ಜಿ.ಟಿ.ದೇವೇಗೌಡ ಮಾತನಾಡಿ ಸುಧಾಮೂರ್ತಿಯವರು ದಸರಾ ಉದ್ಘಾಟನೆ ನೆರವೇರಿಸಲಿದ್ದು, ಸರ್ಕಾರದ ಪರವಾಗಿ ಅಧಿಕೃತ ಆಹ್ವಾನವನ್ನು ನಾವಿಂದು ನೀಡಿದ್ದೇವೆ ಎಂದಿದ್ದಾರೆ.







