ದಿಲ್ಲಿ ಪ್ರವೇಶಿಸಲು ಅವಕಾಶ ನೀಡಿದ ಬಳಿಕ ಪ್ರತಿಭಟನೆ ಹಿಂದೆಗೆದುಕೊಂಡ ರೈತರು

ಹೊಸದಿಲ್ಲಿ, ಸೆ. 3: ಭಾರತೀಯ ಕಿಸಾನ್ ಒಕ್ಕೂಟ ಸೆಪ್ಟಂಬರ್ 23ರಂದು ಆರಂಭಿಸಿದ ‘ಕಿಸಾನ್ ಕ್ರಾಂತಿ ಪಾದಯಾತ್ರೆ’ಯನ್ನು ರಾಷ್ಟ್ರ ರಾಜಧಾನಿ ಕಿಸಾನ್ ಘಾಟ್‌ನಲ್ಲಿ ಬುಧವಾರ ಬೆಳಗ್ಗೆ ಅಂತ್ಯಗೊಳಿಸಿದೆ.
ದಿಲ್ಲಿ ಪೊಲೀಸರು ಮಧ್ಯರಾತ್ರಿ ಬ್ಯಾರಿಕೇಡ್‌ಗಳನ್ನು ತೆಗೆದು ರೈತರಿಗೆ ದಿಲ್ಲಿ ಪ್ರವೇಶಿಸಲು ಅವಕಾಶ ನೀಡಿದ ಬಳಿಕ ಪಾದಯಾತ್ರೆ ಕಿಸಾನ್ ಘಾಟ್‌ಗೆ ತೆರಳಿ ಅಂತ್ಯಗೊಂಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಟ್ರಾಕ್ಟರ್ ಹಾಗೂ ಎತ್ತಿನ ಗಾಡಿಗಳನ್ನು ಚಲಾಯಿಸಿಕೊಂಡು ರಾಷ್ಟ್ರ ರಾಜಧಾನಿ ಪ್ರವೇಶಿಸಿದ ರೈತರು ಕಿಸಾನ್ ಘಾಟ್‌ನತ್ತ ತೆರಳಲು ಉದ್ದೇಶಿಸಿದ್ದರು. ಆದರೆ, ಉತ್ತರಪ್ರದೇಶ-ದಿಲ್ಲಿ ಗಡಿಯಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಸ್ಥಾಪಿಸಿ ರೈತರು ದಿಲ್ಲಿ ಪ್ರವೇಶಿಸದಂತೆ ತಡೆದಿದ್ದರು ಎಂದು ಅವರು ತಿಳಿಸಿದ್ದಾರೆ.
‘‘ಕಿಸಾನ್ ಕ್ರಾಂತಿ ಪಾದಯಾತ್ರೆ ಸೆಪ್ಟಂಬರ್ 23ರಂದು ಆರಂಭವಾಯಿತು. ಕಿಸಾನ್ ಘಾಟ್‌ನಲ್ಲಿ ಇಂದು ಅಂತ್ಯಗೊಂಡಿತು. ಯಾತ್ರೆ ಪೂರ್ಣಗೊಳಿಸಬೇಕು ಎನ್ನುವ ಗುರಿ ನಮಗಿತ್ತು. ನಾವು ಅದನ್ನು ಪೂರ್ಣಗೊಳಿಸಿದೆವು. ಇನ್ನು ನಾವು ನಮ್ಮ ಗ್ರಾಮಕ್ಕೆ ಹಿಂದಿರುಗಲಿದ್ದೇವೆ.’’ ಎಂದು ಭಾರತೀಯ ಕಿಸಾನ್ ಒಕ್ಕೂಟದ ಅಧ್ಯಕ್ಷ ನರೇಶ್ ಟಿಕಾಯತ್ ತಿಳಿಸಿದ್ದಾರೆ.





