ಸಾರ್ವಜನಿಕರಿಗೆ ಸ್ಪಂದಿಸಿ ಉತ್ತಮವಾಗಿ ಕೆಲಸ ಮಾಡಿ: ಚಿಕ್ಕಮಗಳೂರು ಡಿಸಿ ಶ್ರೀರಂಗಯ್ಯ

ಚಿಕ್ಕಮಗಳೂರು,ಅ.03: ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿಗಳಿಗೆ ವರ್ಗಾವಣೆ ಸಹಜ. ಎಷ್ಟು ದಿನಗಳ ಕಾಲ ಕೆಲಸ ಮಾಡಿದ್ದೇವೆ ಎನ್ನುವುದಲ್ಲ, ಸಾರ್ವಜನಿಕರಿಗೆ ಸ್ಪಂದಿಸಿ ಉತ್ತಮವಾಗಿ ಕೆಲಸ ಮಾಡುವುದು ಬಹಳ ಮುಖ್ಯ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂ.ಎಲ್.ವೈಶಾಲಿ ಅವರು ಹಾಸನ ಜಿಲ್ಲೆಗೆ ವರ್ಗಾವಣೆ ಆಗಿರುವ ಸಂಬಂಧ ಕಂದಾಯ ಇಲಾಖೆಯಿಂದ ಇಂದು ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೇಲಿನ ಹುದ್ದೆಯಲ್ಲಿರುವವರು ಸ್ವಂತ ಜಿಲ್ಲೆಯಲ್ಲಿ ಕೆಲಸ ಮಾಡುವುದು ಬಹಳ ಕಷ್ಟ. ವೈಶಾಲಿಯವರು ಬಹಳ ಉತ್ತಮವಾಗಿ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿ ಜೊತೆ ಹಾಗೂ ಸಾರ್ವಜನಿಕರಿಗೆ ಸ್ಪಂದಿಸಿ ಬಹಳ ತಾಳ್ಮೆಯಿಂದ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು ಎಂದ ಜಿಲ್ಲಾಧಿಕಾರಿಗಳು ಅವರು ಉತ್ತಮ ಕಾರ್ಯ ನಿರ್ವಹಿಸುವುದರ ಜೊತೆಗೆ ಕಾನೂನಾತ್ಮಕವಾಗಿ ಎಲ್ಲ ವಿಷಯಗಳನ್ನು ತಿಳಿದುಕೊಂಡಿದ್ದರು. ಅಲ್ಲದೆ ಎಲ್ಲಿ ಬೇಕಾದರೂ ದೊಡ್ಡ ದೊಡ್ಡ ಹುದ್ದೆಯಲ್ಲಿ ಕೆಲಸ ಮಾಡುವ ಶಕ್ತಿ ಅವರಲ್ಲಿದೆ ಎಂದು ಹೇಳಿದರು. ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಪರಸ್ಪರ ಹೊಂದಾಣಿಕೆಯಿಂದ ಸಾರ್ವಜನಿಕರಿಗೆ ಸ್ಪಂದಿಸಿ ಕರ್ತವ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.
ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಸುಮಾರು ನಾಲ್ಕು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿರುವುದು ತೃಪ್ತಿ ತಂದಿದೆ. ಇದಕ್ಕೆ ಸಹಕಾರ ನೀಡಿದ ಎಲ್ಲಾ ಹಿರಿಯ ಅಧಿಕಾರಿಗಳು ಸಿಬ್ಬಂದಿಗೆ ಸ್ಮರಿಸಿಕೊಳ್ಳುವುದಾಗಿ ಹೇಳಿದ ಅವರು ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರ ಜೊತೆ ಮೂರು ಜಿಲ್ಲೆಗಳಲ್ಲಿ ಮಾಡಿದ ಅನುಭವವನ್ನು ಹಂಚಿಕೊಂಡರಲ್ಲದೆ ಜಿಲ್ಲಾಧಿಕಾರಿಗಳಿಗೆ ಇರುವ ತಾಳ್ಮೆ, ಕೆಲಸ ಮಾಡುವ ಜಾಣ್ಮೆ ಅವರಿಂದ ಕಲಿತಿದ್ದೇನೆ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಶಿವಕುಮಾರ್, ನಗರಸಭೆ ಆಯುಕ್ತೆ ತುಷಾರಮಣಿ, ತಹಸೀಲ್ದಾರ್ ನಂದಕುಮಾರ್ ಅವರುಗಳು ಅವರ ಸೇವೆಯನ್ನು ಅವರ ಸರಳ ವ್ಯಕ್ತಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.
ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎಲ್ಲಾ ಶಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿದ್ದರು.
ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆಪ್ತ ಶಾಖೆಯ ಶೈಲ ಸ್ವಾಗತಿಸಿ, ಶಾರದ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







