ಶಬರಿಮಲೆಗೆ ಮಹಿಳೆಯರ ಪ್ರವೇಶ: ನಿಲುವು ಬದಲಿಸಿದ ಆರೆಸ್ಸೆಸ್

ಹೊಸದಿಲ್ಲಿ,ಅ.3: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶಾವಕಾಶ ಕುರಿತು ತನ್ನ ಹಿಂದಿನ ನಿಲುವನ್ನು ಬುಧವಾರ ಬದಲಿಸಿರುವ ಆರೆಸ್ಸೆಸ್,ಭಕ್ತರ ಭಾವನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಮಹಿಳೆಯರಿಗೆ ಪ್ರವೇಶವನ್ನೊದಗಿಸಲು ತರಾತುರಿಯಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿರುವುದಕ್ಕಾಗಿ ಕೇರಳ ಸರಕಾರವನ್ನು ಟೀಕಿಸಿದೆ.
ನ್ಯಾಯಾಲಯದ ತೀರ್ಪನ್ನು ಸಂಘವು ಗೌರವಿಸುತ್ತದೆ,ಆದರೆ ಮಹಿಳೆಯರು ಸೇರಿದಂತೆ ಲಕ್ಷಾಂತರ ಭಕ್ತರ ಭಾವನೆಗಳನ್ನು ಕಡೆಗಣಿಸುವಂತಿಲ್ಲ ಎಂದು ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಭೈಯ್ಯಾಜಿ ಜೋಶಿ ಅವರು ಹೇಳಿದರು.
ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಹಲವಾರು ಹಿಂದು ಸಂಘಟನೆಗಳು ಮಂಗಳವಾರದಿಂದ ನಡೆಸುತ್ತಿರುವ ಪ್ರತಿಭಟನೆಗಳಿಗೆ ಬೆಂಬಲ ವ್ಯಕ್ತಪಡಿಸಿದ ಅವರು,ಇದು ಬಲವಂತದಿಂದ ಸಂಪ್ರದಾಯವನ್ನು ಉಲ್ಲಂಘಿಸಿದ್ದಕ್ಕೆ ಸ್ಪಷ್ಟ ಪ್ರತಿಕ್ರಿಯೆಯಾಗಿದೆ ಎಂದರು.
ಬುಧವಾರದ ಈ ಹೇಳಿಕೆ ಜೋಶಿಯವರು 2016ರಲ್ಲಿ ನೀಡಿದ್ದ ಹೇಳಿಕೆಗೆ ಸಂಪೂರ್ಣ ವಿರುದ್ಧವಾಗಿದೆ. ಸಾವಿರ ವರ್ಷಗಳ ಹಿಂದಿನ ಸಂಪ್ರದಾಯದ ಹೆಸರಿನಲ್ಲಿ ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಿರುವುದು ಅರ್ಥಹೀನವಾಗಿದೆ ಎಂದು ಆಗ ಟಿವಿ ಸಂದರ್ಶನವೊಂದರಲ್ಲಿ ಅವರು ಹೇಳಿದ್ದರು.







