ಫೋರ್ಬ್ಸ್ ಪಟ್ಟಿ: ಸತತ 11ನೇ ಬಾರಿ ಅತಿ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ ಮುಖೇಶ್ ಅಂಬಾನಿ

ಹೊಸದಿಲ್ಲಿ, ಅ. 4: ನಿವ್ವಳ 47.3 ಶತಕೋಟಿ ಡಾಲರ್ ಸಂಪತ್ತಿನೊಂದಿಗೆ ಸತತ 11ನೇ ವರ್ಷವಾದ ಈ ವರ್ಷ ಕೂಡ ರಿಲಾಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅತಿ ಶ್ರೀಮಂತ ಭಾರತೀಯನಾಗಿ ಹೊರಹೊಮ್ಮಿದ್ದಾರೆ ಎಂದು ಫೋರ್ಬ್ಸ್ ಮ್ಯಾಗಝಿನ್ ಹೇಳಿದೆ.
ರಿಲಾಯನ್ಸ್ ಜಿಯೊ ಬ್ರಾಡ್‌ಬ್ಯಾಂಡ್ ಟೆಲ್ಕೋ ಸರ್ವೀಸ್‌ನ ನಿರಂತರ ಯಶಸ್ವಿಯ ನಡುವೆಯೂ ಮುಖೇಶ್ ಅಂಬಾನಿ ಅವರ ಸಂಪತ್ತು 9.3 ಶತಕೋಟಿ ಡಾಲರ್‌ನಷ್ಟು ಹೆಚ್ಚಳವಾಗಿದ್ದು, ಈ ವರ್ಷ ಸಂಪತ್ತು ಅತಿ ಹೆಚ್ಚಳವಾದ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಫೋರ್ಬ್ಸ್-ಭಾರತದ ಶ್ರೀಮಂತ ವ್ಯಕ್ತಿಗಳ ಪಟ್ಟಿ - 2018ರ ಪ್ರಕಾರ ವಿಪ್ರೋ ಅಧ್ಯಕ್ಷ ಅಝೀಂ ಪ್ರೇಮ್ ಜಿ ಅವರು ಎರಡನೇ ಅತೀ ಶ್ರೀಮಂತ ವ್ಯಕ್ತಿ. 21 ಶತಕೋಟಿ ಡಾಲರ್ ಇದ್ದ ಅವರ ಸಂಪತ್ತು ಈಗ 2 ಶತಕೋಟಿ ಡಾಲರ್‌ನಷ್ಟು ಹೆಚ್ಚಳವಾಗಿದೆ. ಏರ್‌ಸೆಲ್ಲಾರ್ ಮಿತ್ತಲ್ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಲಕ್ಷ್ಮೀ ಮಿತ್ತಲ್ ಮೂರನೇ ಅತಿ ಶ್ರೀಮಂತ ವ್ಯಕ್ತಿ. ಅವರ ಒಟ್ಟು ಸಂಪತ್ತು 18.3 ಶತಕೋಟಿ. ಈಗ ಅವರ ಸಂಪತ್ತಿನಲ್ಲಿ 1.8 ಶತಕೋಟಿ ಡಾಲರ್ ಹೆಚ್ಚಳವಾಗಿದೆ.
ಮಿತ್ತಲ್ ಅವರ ನಂತರದ ಶ್ರೀಮಂತ ವ್ಯಕ್ತಿ 18 ಶತಕೋಟಿ ಡಾಲರ್ ನಿವ್ವಳ ಸಂಪತ್ತು ಹೊಂದಿದ ಹಿಂದುಜಾ ಬ್ರದರ್ಸ್ ಹಾಗೂ 15.7 ಶತಕೋಟಿ ಡಾಲರ್ ಸಂಪತ್ತು ಹೊಂದಿದ ಪಲ್ಲೋಂಜಿ ಮಿಸ್ತ್ರಿ. ಭಾರತದ ಅತಿ ಶ್ರೀಮಂತರ 10 ಮಂದಿ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡ ಇತರ ಶ್ರೀಮಂತರೆಂದರೆ ಶಿವ್ ನಾಡರ್ (14.6 ಶತಕೋಟಿ ಡಾಲರ್), ಗೋದ್ರೆಜ್ ಫ್ಯಾಮಿಲಿ (14 ಶತಕೋಟಿ ಡಾಲರ್), ದಿಲೀಪ್ ಸಾಂಘ್ವಿ (12.6 ಶತಕೋಟಿ ಡಾಲರ್), ಕುಮಾರ್ ಬಿರ್ಲಾ (12.5 ಶತಕೋಟಿ ಡಾಲರ್), ಗೌತಮ್ ಅದಾನಿ (11.9 ಶತಕೋಟಿ ಡಾಲರ್).







