ಕೊನಾರ್ಕ ದೇವಾಲಯದ ಬಗ್ಗೆ ವಿವಾದಾತ್ಮಕ ಟ್ವೀಟ್: ರಕ್ಷಣಾ ವಿಶ್ಲೇಷಕ ಮಿತ್ರಾಗೆ ಜಾಮೀನು ನಿರಾಕರಣೆ

ಹೊಸದಿಲ್ಲಿ, ಅ.4: ಕೋನಾರ್ಕ್ ದೇವಾಲಯದ ಕುರಿತು ವಿವಾದಾತ್ಮಕ ಅಭಿಪ್ರಾಯ ಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ಆಗಸ್ಟ್ 20ರಂದು ಬಂಧಿತರಾದ ರಕ್ಷಣಾ ವಿಶ್ಲೇಷಕ ಅಭಿಜಿತ್ ಐಯ್ಯರ್ ಮಿತ್ರಾ ಅವರಿಗೆ, ಜಾಮೀನು ಬಿಡುಗಡೆ ನೀಡಲು ಸುಪ್ರೀಂಕೋರ್ಟ್ ಗುರುವಾರ ನಿರಾಕರಿಸಿದೆ.
ಮಿತ್ರಾ ಅವರಿಗೆ ಪ್ರಾಣಾಪಾಯವಿರುವುದಾಗಿ ಅವರ ವಕೀಲರು ತಿಳಿಸಿದಾಗ, ಉತ್ತರಿಸಿದ ಸಿಜೆಐ ರಂಜನ್ ಗೊಗೊಯಿ ನೇತೃತ್ವದ ನ್ಯಾಯಪೀಠ, ‘ಅವರಿಗೆ ಜೈಲೇ ಅತ್ಯಂತ ಸುರಕ್ಷಿತ ಸ್ಥಳ’ ಎಂದು ಅಭಿಪ್ರಾಯಿಸಿತು. ದೇವಾಲಯದ ಬಗ್ಗೆ ಮಿತ್ರಾ ವ್ಯಕ್ತಪಡಿಸಿದ ಅನಿಸಿಕೆಗಳು ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತಿದೆಯೆಂದು ಹೇಳಿದ ನ್ಯಾಯಪೀಠವು ಅರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ಕೊನಾರ್ಕ್ ದೇವಾಲಯದ ಬಗ್ಗೆ ವಿವಾದಾತ್ಮಕ ವಿಡಿಯೋ ಒಂದನ್ನು ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಮಿತ್ರಾ ಅವರನ್ನು ಕಳೆದ ತಿಂಗಳು ಹೊಸದಿಲ್ಲಿಯಲ್ಲಿ ಬಂಧಿಸಲಾಗಿತ್ತು. ದೇವಾಲಯದ ಸಂಕೀರ್ಣದಲ್ಲಿರುವ ಮಿಥುನಶಿಲ್ಪಗಳ ವಿವಿಧ ಲೈಂಗಿಕ ಭಂಗಿಗಳ ದೃಶ್ಯಗಳನ್ನು ಟ್ವೀಟ್‌ನಲ್ಲಿ ಅವರು ಪ್ರಸಾರ ಮಾಡಿದ್ದರು. ‘‘ ಇದೊಂದು ಪವಿತ್ರ ಸ್ಥಳವಾಗಿರಲು ಸಾಧ್ಯವೇ?. ಖಂಡಿತವಾಗಿಯೂ ಇಲ್ಲ. ನಮ್ಮನ್ನು ಕೀಳು ಮಾಡಲು ಬಯಸುವ ಮುಸ್ಲಿಮರು, ಹಿಂದುಗಳ ವಿರುದ್ಧ ನಡೆಸಿದ ಸಂಚು ಇದಾಗಿದೆ. ಜೈಶ್ರೀರಾಮ್. ನೂತನ ರಾಮದೇವಾಲಯದಲ್ಲಿ ಇಂತಹ ಅಶ್ಲೀಲ ಶಿಲ್ಪಗಳು ಇರುವುದಿಲ್ಲ’’ ಎಂದವರು ಟ್ವಿಟರ್‌ನಲ್ಲಿ ಬರೆದಿದ್ದರು.
ಇದರ ಬೆನ್ನಲ್ಲೇ ಮಿತ್ರಾ ಮತ್ತೊಂದು ಟ್ವೀಟ್ ಪ್ರಕಟಿಸಿದ್ದು, ತಾನು ಬರೆದಿದ್ದುದು ತಮಾಷೆಗಾಗಿ ಎಂದವರು ಸ್ಪಷ್ಟಪಡಿಸಿದ್ದರು. ‘‘ ಕೋನಾರ್ಕದ ಶಿಲ್ಪಕಲೆಗಳು ಅಭೂತಪೂರ್ವವಾದವು ಹಾಗೂ ಅತ್ಯಂತ ಕಲಾತ್ಮಕ ಪ್ರಜ್ಞೆಯನ್ನು ಹೊಂದಿವೆ’’ ಎಂದರು ಹೇಳಿದ್ದರು. ಮಿತ್ರಾ ಅವರ ವಿವಾದಾತ್ಮಕ ಅನಿಸಿಕೆಗಳು ಒಡಿಶಾ ವಿಧಾನಸಭೆಯಲ್ಲಿ ಭಾರೀ ಕೋಲಾಹಲವನ್ನು ಸೃಷ್ಟಿಸಿದ್ದವು. ಸೆಪ್ಟೆಂಬರ್ 29ರಂದು ಬಂಧಿತರಾದ ಅವರನ್ನು 1 ಲಕ್ಷ ರೂ. ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿತ್ತು. ಮಿತ್ರಾ ಅವರ ವಿವಾದಾತ್ಮಕ ಟ್ವೀಟ್ ಬಗ್ಗೆ ಒಡಿಶಾ ವಿಧಾನಸಭೆ ಸಮಿತಿಯೊಂದನ್ನು ರಚಿಸಿದ್ದು, ತನ್ನ ಮುಂದೆ ಅಕ್ಟೋಬರ್ 11ರೊಳಗೆ ತನ್ನ ಮುಂದೆ ಹಾಜರಾಗುವಂತೆ ಸೂಚಿಸಿತ್ತು.







