ಬಿಹಾರ್ ಆಶ್ರಯಧಾಮ ಅತ್ಯಾಚಾರ ಪ್ರಕರಣ: ಅಸ್ಥಿಪಂಜರ ಪತ್ತೆ ಹಚ್ಚಿದ ಸಿಬಿಐ

ಮುಝಪ್ಫರಪುರ, ಅ. 4: ಮುಝಪ್ಫರಪುರ ಆಶ್ರಯ ಧಾಮ ಪ್ರಕರಣದಲ್ಲಿ ಇತ್ತೀಚೆಗಿನ ಬೆಳವಣಿಗೆಯೊಂದರಲ್ಲಿ, ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಜಿಲ್ಲೆಯ ಸಿಕಂದರಪುರ ಪ್ರದೇಶದ ಸ್ಮಶಾನದಲ್ಲಿ ಮಾನವನ ಅಸ್ಥಿಪಂಜರ ಪತ್ತೆ ಮಾಡಿದೆ. ಐದು ತಿಂಗಳ ಹಿಂದೆ ಈ ಪ್ರಕರಣ ಬೆಳಕಿಗೆ ಬಂದಿತ್ತು.
40 ಬಾಲಕಿಯರ ಮೇಲೆ ದೌರ್ಜನ್ಯ ನಡೆಸಿರುವುದು ತನಿಖೆ ವೇಳೆ ಬಹಿರಂಗಗೊಂಡಿತ್ತು. ಓರ್ವ ಬಾಲಕಿಯನ್ನು ಹತ್ಯೆಗೈಯಲಾಗಿತ್ತು ಹಾಗೂ ಮೃತದೇಹವನ್ನು ದಫನ ಮಾಡಿ ಕೊಲೆಯನ್ನು ಮುಚ್ಚಿ ಹಾಕಲು ಯತ್ನಿಸಲಾಗಿತ್ತು. ಬುಧವಾರ ಅಪರಾಹ್ನ ಸಿಬಿಐ ಅಧಿಕಾರಿಗಳು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಸ್ಮಶಾನಕ್ಕೆ ಆಗಮಿಸಿತ್ತು. ಉತ್ಖನನದ ಪರಿಶೀಲನೆ ನಡೆಸಿತ್ತು. ಸ್ಮಶಾನದಿಂದ ಹೊರಗೆ ತೆಗೆಯಲಾದ ಅಸ್ಥಿಪಂಜರವನ್ನು ಇನ್ನಷ್ಟು ತನಿಖೆಗೆ ತನಿಖಾ ತಂಡ ಕೊಂಡು ಹೋಗಿದೆ.
40ಕ್ಕೂ ಅಧಿಕ ಬಾಲಕಿಯರು ಲೈಂಗಿಕ ಕಿರುಕುಳಕ್ಕೆ ಒಳಗಾದ ಬಿಹಾರದ ಮುಝಫ್ಫರಪುರ ಆಶ್ರಯ ಧಾಮ ಪ್ರಕರಣವನ್ನು ಈ ವರ್ಷದ ಆರಂಭದಲ್ಲಿ ಮುಂಬೈ ಮೂಲದ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸಯನ್ಸ್ ಬಹಿರಂಗಗೊಳಿಸಿತ್ತು. ಪ್ರಧಾನ ಆರೋಪಿ ಬ್ರಿಜೇಶ್ ಠಾಕೂರ್ ಸೇರಿದಂತೆ ಈ ಆಶ್ರಯ ಧಾಮದ 11 ಉದ್ಯೋಗಿಗಳನ್ನು ಬಂಧಿಸಲಾಗಿತ್ತು.





