ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣ: ಅಮಿತ್ ಶಾ ಬಿಡುಗಡೆ ಪ್ರಶ್ನಿಸದಿರುವುದನ್ನು ಸಮರ್ಥಿಸಿಕೊಂಡ ಸಿಬಿಐ

ಮುಂಬೈ, ಅ. 3: ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಬಿಡುಗಡೆ ನೀಡಿರುವುದನ್ನು ಪ್ರಶ್ನಿಸದಿರಲು ಸಿಬಿಐ ಕೈಗೊಂಡ ನಿರ್ಧಾರ ‘ಪ್ರಜ್ಞಾಪೂರ್ವಕ’ ಹಾಗೂ ‘ಸಮಂಜಸ’ ಎಂದು ಸಿಬಿಐ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಬುಧವಾರ ತಿಳಿಸಿದೆ.
ಸಿಬಿಐ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾದ ಎರಡು ಸಾರ್ವಜನಿಕ ಹಿತಾಸಕ್ತಿ ದಾವೆಯ ವಜಾ ಕೋರಿರುವ ಸಿಬಿಐ, ಮನವಿ ‘ರಾಜಕೀಯ ಪ್ರೇರಿತ’ ಹಾಗೂ ‘ಪ್ರಚಾರದ ಉದ್ದೇಶ’ ಹೊಂದಿದೆ ಎಂದಿದೆ. 2014ರಲ್ಲಿ ಕೇಂದ್ರದಲ್ಲಿ ಸರಕಾರ ಬದಲಾದ ಬಳಿಕ ಅಮಿತ್ ಶಾ ಕುರಿತ ನಿಲುವನ್ನು ಸಿಬಿಐ ಬದಲಾಯಿಸಿದೆ ಎಂದು ದೂರುದಾರರ ಪರ ವಕೀಲ ವಾದಿಸಿದರು.
ಶಾ ಅವರನ್ನು ಬಿಡುಗಡೆ ಮಾಡಿ ವಿಚಾರಣಾ ನ್ಯಾಯಾಲಯ ನೀಡಿದ ತೀರ್ಪು ಹಾಗೂ ಅದನ್ನು ಎತ್ತಿ ಹಿಡಿದ ವಿವಿಧ ನ್ಯಾಯಾಲಯಗಳ ತೀರ್ಪನ್ನು ಸಿಬಿಐ ಅಧ್ಯಯನ ನಡೆಸಿದೆ ಎಂದು ಸಿಬಿಐಯ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದರು.
ಈ ಪ್ರಕರಣದಲ್ಲಿ ಸಿಬಿಐ ಇಬ್ಬರು ಇತರ ವ್ಯಕ್ತಿಗಳ ಬಿಡುಗಡೆ ವಿರುದ್ಧ ಮರು ಪರಿಶೀಲನಾ ಮನವಿ ಸಲ್ಲಿಸಿದ ಹೊರತಾಗಿಯೂ ಅಮಿತ್ ಶಾ ಅವರ ಬಿಡುಗಡೆ ಪ್ರಶ್ನಿಸಲು ಯಾಕೆ ನಿರ್ಧರಿಸಿಲ್ಲ ಎಂಬ ಬಗ್ಗೆ ಪ್ರಶ್ನಿಸುವಂತೆ ಹೈಕೋರ್ಟ್‌ನಲ್ಲಿ ಎರಡು ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಲಾಗಿದೆ. ಬಾಂಬೆ ಲಾಯರ್ಸ್ ಅಸೋಸಿಯೇಶನ್ ಹಾಗೂ ಸ್ಥಳೀಯ ಪತ್ರಕರ್ತರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ನ್ಯಾಯಮೂರ್ತಿಗಳಾದ ರಂಜಿತ್ ಮೋರೆ ಹಾಗೂ ಭಾರತಿ ಡಾಂಗ್ರೆ ಅವರನ್ನು ಒಳಗೊಂಡ ಪೀಠ ಬುಧವಾರ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆ ನಡೆಸಿತು.







