ಒಳಚರಂಡಿ ಸ್ವಚ್ಛತೆ ಸಂದರ್ಭ 600 ಕಾರ್ಮಿಕರು ಮೃತ: ಎನ್‌ಸಿಎಸ್‌ಕೆ ವರದಿ

ಹೊಸದಿಲ್ಲಿ, ಅ.4: ಕಳೆದ ಒಂದೂವರೆ ವರ್ಷದಲ್ಲಿ ಒಳಚರಂಡಿ ಸ್ವಚ್ಛಗೊಳಿಸುವ ಸಂದರ್ಭ 600 ಕಾರ್ಮಿಕರು ಮೃತಪಟ್ಟ ಪ್ರಕರಣ ವರದಿಯಾಗಿದೆ ಎಂದು ರಾಷ್ಟ್ರೀಯ ಸ್ವಚ್ಛತಾ ಕಾರ್ಮಿಕರ ಆಯೋಗ(ಎನ್‌ಸಿಎಸ್‌ಕೆ)ದ ಅಧ್ಯಕ್ಷ ಮನ್ಹರ್ ವಾಲ್ಜಿಭಾಯ್ ಝಾಲಾ ತಿಳಿಸಿದ್ದಾರೆ.
ಒಳಚರಂಡಿ ಸ್ವಚ್ಛಗೊಳಿಸುವಾಗ ಮೃತಪಟ್ಟ ಕಾರ್ಮಿಕರ ಕುರಿತ ವರದಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, 100 ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ನೀಡಲಾಗಿದೆ. ಇಂತಹ ಪ್ರಕರಣಗಳಲ್ಲಿ ಸಂತ್ರಸ್ತ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ದೊರಕಿಸಿಕೊಡಲು ಆಯೋಗ ಪ್ರಯತ್ನಿಸುತ್ತದೆ ಎಂದು ಹೇಳಿದ್ದಾರೆ. ಎನ್‌ಸಿಎಸ್‌ಕೆಯ ಅಧ್ಯಕ್ಷನಾಗಿ ತಾನು ಅಧಿಕಾರ ವಹಿಸಿಕೊಳ್ಳುವ ಮೊದಲು ಒಳಚರಂಡಿ ಕಾರ್ಮಿಕರ ಸಾವಿನ ಕುರಿತ ಮಾಹಿತಿಯನ್ನು ದಾಖಲಿಸುತ್ತಿರಲಿಲ್ಲ ಎಂದ ಅವರು, ಶೌಚ ಗುಂಡಿ ಹಾಗೂ ಚರಂಡಿ ಸ್ವಚ್ಛತೆಗೆ ಶೀಘ್ರದಲ್ಲೇ 200 ಯಂತ್ರಗಳನ್ನು ಒದಗಿಸಲಾಗುವುದು ಎಂದರು. ‘ರಾಷ್ಟ್ರೀಯ ಗರಿಮಾ(ಘನತೆ) ಅಭಿಯಾನ್’ ಈ ವರ್ಷದ ಮಾರ್ಚ್‌ನಿಂದ ಜುಲೈವರೆಗೆ 11 ರಾಜ್ಯಗಳಲ್ಲಿ ಸಮೀಕ್ಷೆ ನಡೆಸಿದ್ದು, 51 ಪ್ರಕರಣಗಳಲ್ಲಿ ಸಂತ್ರಸ್ತರ ಕುಟುಂಬದವರಿಗೆ ಪರಿಹಾರ ನೀಡದಿರುವುದು ಮತ್ತು ಕೇವಲ 16 ಪ್ರಕರಣಗಳಲ್ಲಿ ಪರಿಹಾರ ನೀಡಿರುವುದು ತಿಳಿದುಬಂದಿದೆ.
ಅಲ್ಲದೆ ಶೌಚ ಗುಂಡಿ ಅಥವಾ ಒಳಚರಂಡಿ ಸ್ವಚ್ಛಗೊಳಿಸುವ ಸಂದರ್ಭ ನಡೆಯುವ ಬಹುತೇಕ ಸಾವಿನ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸುವುದೇ ಇಲ್ಲ. ಆದ್ದರಿಂದ ಇಂತಹ ಪ್ರಕರಣಗಳಲ್ಲಿ ಕಾನೂನುಕ್ರಮ ಜರಗಿಸಲಾಗುವುದಿಲ್ಲ ಎಂದು ವರದಿ ತಿಳಿಸಿದೆ. 1992ರಿಂದ 2018ರವರೆಗಿನ ಅವಧಿಯಲ್ಲಿ 27 ರಾಜ್ಯಗಳಲ್ಲಿ ಒಟ್ಟು 140 ಘಟನೆಗಳಲ್ಲಿ 205 ಸಾವಿನ ಪ್ರಕರಣ ವರದಿಯಾಗಿದೆ. ಇದರಲ್ಲಿ ಗುಜರಾತ್‌ನಲ್ಲಿ 62 ಸಾವು, ಮಹಾರಾಷ್ಟ್ರ ಮತ್ತು ಉ.ಪ್ರದೇಶಗಳಲ್ಲಿ ತಲಾ 29, ತಮಿಳುನಾಡಿನಲ್ಲಿ 24 ಸಾವಿನ ಪ್ರಕರಣ ವರದಿಯಾಗಿದೆ. ವ್ಯವಸ್ಥಾಪನೆಯ ಸಮಸ್ಯೆಯಿಂದಾಗಿ ಹೆಚ್ಚಿನ ರಾಜ್ಯಗಳನ್ನು ಸಮೀಕ್ಷೆಯ ವ್ಯಾಪ್ತಿಗೆ ಸೇರಿಸಲು ಸಾಧ್ಯವಾಗಿಲ್ಲ. ಆದ್ದರಿಂದ ತಮ್ಮ ವರದಿಯಲ್ಲಿ ಉಲ್ಲೇಖಿಸಲಾಗಿರುವ ಸಾವಿನ ಪ್ರಮಾಣ ಎನ್‌ಸಿಎಸ್‌ಕೆ ವರದಿಗಿಂತ ಕಡಿಮೆ ಇರಬಹುದು ಎಂದು ಅಭಿಯಾನದ ಸಂಯೋಜಕರು ತಿಳಿಸಿದ್ದಾರೆ.







