ಲಂಚ ಸ್ವೀಕಾರ; ಗ್ರಾಮ ಕರಣಿಕ ದೋಷಮುಕ್ತಿ
ಕುಂದಾಪುರ, ಅ.4: ಖಾತೆ ಬದಲಾವಣೆ ಮಾಡಲು ಲಂಚವನ್ನು ಪಡೆದ ಆರೋಪಗಳಿಂದ ಬೀಜಾಡಿ ಗ್ರಾಮದ ಗ್ರಾಮ ಕರಣಿಕರಾಗಿದ್ದ ಅಬ್ದುಲ್ ರೆಹಮಾನ್ ಬ್ಯಾರಿ ಅವರನ್ನು ಕುಂದಾಪುರದ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ದೋಷಮುಕ್ತಗೊಳಿಸಿದೆ.
ಆರೋಪಿತನು ಸರಕಾರಿ ನೌಕರನಾಗಿದ್ದು, ಲಂಚ ಸ್ವೀಕರಿಸಿದ ಬಗ್ಗೆ ಲಂಚ ಸ್ವೀಕರಿಸಿದ ಬಗ್ಗೆ ಲಂಚ ನಿರೋಧ ಕಾಯ್ದೆಯಡಿ ಆರೋಪಣೆಯನ್ನು ಮಾಡಲಾಗಿತ್ತು. ಲೋಕಾಯುಕ್ತ ನಿರೀಕ್ಷಕರಾಗಿದ್ದ ಬಿ.ಪಿ.ದಿನೇಶ್ ಕುಮಾರ್ ಅವರು ಆರೋಪಿಯ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಕುಂದಾಪುರದ ಅಂದಿನ ತಹಶೀಲ್ದಾರ್ ಆಗಿದ್ದ ರಾಜು ಮೊಗವೀರ ಹಾಗೂ ಉಡುಪಿಯ ಜಿಲ್ಲಾಧಿಕಾರಿ ಹೇಮಲತಾ ಸಹಿತ ಒಟ್ಟು ಎಂಟು ಮಂದಿ ನ್ಯಾಯಾಲಯದಲ್ಲಿ ಸಾಕ್ಷ ನುಡಿದಿದ್ದರು. ಆರೋಪಿ ಲಂಚ ಕೇಳಿದ ಬಗ್ಗೆ ಧ್ವನಿ ಸುರುಳಿಯನ್ನು ಹಾಜರು ಪಡಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಪ್ರಕಾಶ್ ಖಂಡೇರಿ ಆರೋಪಿಯನ್ನು ದೋಷಮುಕ್ತಗೊಳಿಸಿ ಬಿಡುಗಡೆ ಮಾಡಿದ್ದಾರೆ. ಆರೋಪಿಯ ಪರವಾಗಿ ಕುಂದಾಪುರದ ನ್ಯಾಯವಾದಿ ರವಿಕರಣ ಮುರ್ಡೇಶ್ವರ ವಾದಿಸಿದ್ದರು.
Next Story





