ಶೃಂಗೇರಿ ಪಟ್ಟಣದ ವ್ಯಾಪಾರ ಮಳಿಗೆ ತೆರವುಗೊಳಿಸುವ ವಿಚಾರ: ಸರಕಾರ, ಚಿಕ್ಕಮಗಳೂರು ಡಿಸಿಗೆ ಹೈಕೋರ್ಟ್ ನೋಟಿಸ್

ಬೆಂಗಳೂರು, ಅ.4: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದ ಗಾಂಧಿ ಮೈದಾನದಲ್ಲಿನ ವ್ಯಾಪಾರ ಮಳಿಗೆಗಳನ್ನು ತೆರವುಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರಕಾರ, ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ನೋಟಿಸ್ ಜಾರಿಗೊಳಿಸಿದೆ.
ಈ ಆದೇಶವನ್ನು ಪ್ರಶ್ನಿಸಿ ಶೃಂಗೇರಿ ಪಟ್ಟಣದ ಗಾಂಧಿ ಮೈದಾನದಲ್ಲಿ ವ್ಯಾಪಾರ ಮಳಿಗೆ ಹೊಂದಿರುವ ಕೆ.ಎ.ಮಹೇಶ್ ಹಾಗೂ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿದೆ.
ವ್ಯಾಪಾರ ಮಳಿಗೆಗಳನ್ನು ತೆರವುಗೊಳಿಸಿ ವರದಿ ಸಲ್ಲಿಸಲು 2018ರ ಆ.21ರಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಇದಕ್ಕೆ ಉತ್ತರವಾಗಿ ಪಟ್ಟಣ ಪಂ. ಯ ಮಳೆಗಾಲದಲ್ಲಿ ಇಲ್ಲಿ ಯಾವುದೆ ವ್ಯಾಪಾರ ನಡೆಯುವುದಿಲ್ಲ. ಯಾವುದೆ ನಷ್ಟವೂ ಸಂಭವಿಸಿಲ್ಲ ಎಂದು ಜಿಲ್ಲಾಧಿಕಾರಿಗೆ ಪತ್ರದ ಮುಖೇನ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶವನ್ನು ರದ್ದುಗೊಳಿಸಲು ಅರ್ಜಿಯಲ್ಲಿ ಕೊರಲಾಗಿದೆ.
ಕಳೆದ ಎರಡು ದಶಕಗಳಿಂದ ಅರ್ಜಿದಾರರು ಇಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಪಟ್ಟಣ ಪಂಚಾಯತಿಯೂ ಗುರುತಿನ ಚೀಟಿ, ಪರವಾನಿಗೆಯನ್ನು ಕೊಡಲಾಗಿದೆ. ಆದರೂ ಜಿಲ್ಲಾಧಿಕಾರಿಯು ಮಳಿಗೆಗಳನ್ನು ತೆರವುಗೊಳಿಸಲು ಆದೇಶ ಹೊರಡಿಸಿದ್ದಾರೆ. ಹೀಗಾಗಿ, ಆದೇಶವನ್ನು ರದ್ದುಗೊಳಿಸಲು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.





