ಚಡಚಣ ಹತ್ಯೆ ಪ್ರಕರಣ: ನಿರೀಕ್ಷಣಾ ಜಾಮೀನಿಗಾಗಿ ಬೆಳಗಾವಿ ಕೋರ್ಟ್ ಮೊರೆ ಹೋದ ಸಿಪಿಐ
ಬೆಳಗಾವಿ, ಅ.4: ಗಂಗಾಧರ ಚಡಚಣ ನಿಗೂಢ ಹತ್ಯೆ ಹಾಗೂ ಧರ್ಮರಾಜ ಚಡಚಣ ನಕಲಿ ಎನ್‌ಕೌಂಟರ್ ಪ್ರಕರಣ ಸಂಬಂಧ ಚಡಚಣ ಪೊಲೀಸ್ ಠಾಣೆಯ ಹಿಂದಿನ ಸಿಪಿಐ ಮಲ್ಲಿಕಾರ್ಜುನ ಬಸವಂತ ಅಸೋದೆ ಬೆಳಗಾವಿಯ ಜಿಲ್ಲಾ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಬೆಳಗಾವಿಯ ಎಂಟನೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಮಲ್ಲಿಕಾರ್ಜುನ ಅಸೋದೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣ ಇದೀಗ ಮೊದಲನೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿದೆ.
ಮಲ್ಲಿಕಾರ್ಜುನ ಅಸೋದೆ ಈ ಹಿಂದೆ ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರಗೊಂಡಿತ್ತು. ಅಸೋದೆ ಅವರು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮೊರಬ ಗ್ರಾಮದವರಾಗಿದ್ದು, ಈ ಆಧಾರದ ಮೇಲೆ ಬೆಳಗಾವಿ ಕೋರ್ಟ್‌ಗೆ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮಲ್ಲಿಕಾರ್ಜುನ ಅಸೋದೆ ಪರ ವಕೀಲರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುತ್ತಿದ್ದಂತೆ ಚಡಚಣ ಕುಟುಂಬದ ಪರ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಹೀಗಾಗಿ, ಮಲ್ಲಿಕಾರ್ಜುನ ಅಸೋದೆ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಧಾರವಾಡ ಹೈಕೋರ್ಟ್ ಪೀಠ ತಡೆ ನೀಡಿದೆ ಎಂದು ತಿಳಿದು ಬಂದಿದೆ.







