2 ಅಂತಾರಾಷ್ಟ್ರೀಯ ಒಪ್ಪಂದಗಳಿಂದ ಹಿಂದೆ ಸರಿದ ಅಮೆರಿಕ: ಅಂತಾರ್‌ರಾಷ್ಟ್ರೀಯ ನ್ಯಾಯಾಲಯಕ್ಕೂ ಟೀಕೆ

ವಾಶಿಂಗ್ಟನ್, ಅ. 4: ಅಮೆರಿಕದ ನೀತಿಗಳ ವಿರುದ್ಧ ಇರಾನ್ ಮತ್ತು ಫೆಲೆಸ್ತೀನ್‌ಗಳು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ದೂರು ನೀಡಿದ ಬಳಿಕ, ಅಮೆರಿಕದ ಡೊನಾಲ್ಡ್ ಟ್ರಂಪ್ ಸರಕಾರವು ಬುಧವಾರ ಎರಡು ಅಂತರ್‌ರಾಷ್ಟ್ರೀಯ ಒಪ್ಪಂದಗಳಿಂದ ಹಿಂದೆ ಸರಿದಿದೆ.
ಅದೇ ವೇಳೆ, ವಿಶ್ವಸಂಸ್ಥೆಯ ಅತ್ಯುನ್ನತ ನ್ಯಾಯ ಮಂಡಳಿಯಾದ ಅಂತರ್‌ರಾಷ್ಟ್ರೀಯ ಕಾನೂನು ನ್ಯಾಯಾಲಯ (ಐಸಿಜೆ)ವು ‘ರಾಜಕೀಕರಣಗೊಂಡಿದೆ ಹಾಗೂ ಪರಿಣಾಮಹೀನ’ವಾಗಿದೆ ಎಂಬುದಾಗಿಯೂ ಅಮೆರಿಕ ಟೀಕಿಸಿದೆ.
ಅಷ್ಟೇ ಅಲ್ಲದೆ, ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪಿಗೆ ಒಳಪಡಬೇಕಾದ ಎಲ್ಲ ಅಂತರ್‌ರಾಷ್ಟ್ರೀಯ ಒಪ್ಪಂದಗಳನ್ನು ಅಮೆರಿಕ ಮರುಪರಿಶೀಲಿಸುವುದು ಎಂಬುದಾಗಿ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಹೇಳಿದರು.
ಇದಕ್ಕೂ ಮೊದಲು, ಅಮೆರಿಕದ ದಿಗ್ಬಂಧನಗಳನ್ನು ಪ್ರಶ್ನಿಸಿ ಇರಾನ್ ಹೂಡಿದ ಮೊಕದ್ದಮೆಯಲ್ಲಿ, ಅಂತಾರಾಷ್ಟ್ರೀಯ ನ್ಯಾಯಾಲಯವು ಇರಾನ್ ಪರವಾಗಿ ತೀರ್ಪು ನೀಡಿರುವುದನ್ನು ಸ್ಮರಿಸಬಹುದಾಗಿದೆ.
ಅಮೆರಿಕದ ಆರ್ಥಿಕ ದಿಗ್ಬಂಧನಗಳು ಮಾನವೀಯ ನೆರವು ಮತ್ತು ನಾಗರಿಕ ವಾಯುಯಾನ ಸುರಕ್ಷತೆಯ ಮೇಲೆ ಪರಿಣಾಮ ಬೀರಬಾರದು ಎಂಬ ತೀರ್ಪನ್ನು ಐಸಿಜೆ ನೀಡಿತ್ತು.
ಟ್ರಂಪ್ ಆಡಳಿತವು ವಿಧಿಸಿರುವ ದಿಗ್ಬಂಧನಗಳು 1955ರ ‘ಸೌಹಾರ್ದತೆಯ ಒಪ್ಪಂದ’ಕ್ಕೆ ವಿರುದ್ಧವಾಗಿದೆ ಎಂಬುದಾಗಿ ಇರಾನ್ ವಾದಿಸಿತ್ತು. ಆ ಒಪ್ಪಂದದಿಂದ ಹೊರಬರುವ ಮೂಲಕ ಅಮೆರಿಕ ಇದಕ್ಕೆ ಪ್ರತಿಕ್ರಿಯಿಸಿತು.
ಫೆಲೆಸ್ತೀನ್‌ಗೂ ಅಮೆರಿಕ ಹೊಡೆತ
ಅಮೆರಿಕವು 1961ರ ವಿಯೆನ್ನಾ ರಾಜತಾಂತ್ರಿಕ ಸಂಬಂಧಗಳ ಒಪ್ಪಂದದಡಿ ಬರುವ ‘ಆಪ್ಶನಲ್ ಪ್ರೊಟೊಕಾಲ್’ನಿಂದಲೂ ಹಿಂದೆ ಸರಿಯಲಿದೆ ಎಂದು ಬೋಲ್ಟನ್ ಹೇಳಿದರು.
ಅಮೆರಿಕವು ತನ್ನ ಇಸ್ರೇಲ್ ರಾಯಭಾರ ಕಚೇರಿಯನ್ನು ಟೆಲ್ ಅವೀವ್‌ನಿಂದ ಜೆರುಸಲೇಮ್‌ಗೆ ಸ್ಥಳಾಂತರಿಸಿರುವುದನ್ನು ಫೆಲೆಸ್ತೀನ್ ಇದೇ ಕಾಯ್ದೆಯಡಿಯಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಿರುವುದನ್ನು ಸ್ಮರಿಸಬಹುದಾಗಿದೆ.







