ನಾಡೋಜ ದೇಜಗೌ ವಿದ್ಯಾಭ್ಯಾಸದ ಜೊತೆಗೆ ಬದುಕುವುದನ್ನೂ ಕಲಿಸಿದರು: ಸಾಹಿತಿ ಕಮಲಾ ಹಂಪನಾ

ಮೈಸೂರು,ಅ.4: ನಾಡೋಜ ಡಾ.ದೇ.ಜವರೇಗೌಡ ಅವರು ವಿದ್ಯಾಭ್ಯಾಸವನ್ನಷ್ಟೇ ಕಲಿಸಿದವರಲ್ಲ. ಬದುಕು ಹೇಗೆ ನಡೆಯಬೇಕು ಎಂಬುದನ್ನೂ ಕೂಡ ಕಲಿಸಿದವರು ಎಂದು ಹಿರಿಯ ಸಾಹಿತಿ ಕಮಲಾ ಹಂಪನಾ ಬಣ್ಣಿಸಿದರು.
ಮಾನಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಗುರುವಾರ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಕರ್ನಾಟಕ ಜಾನಪದ ಪರಿಷತ್ತು ಮೈಸೂರು ಘಟಕ ವತಿಯಿಂದ ಆಯೋಜಿಸಲಾದ ದೇಜಗೌ ಜನ್ಮ ಶತಮಾನೋತ್ಸವ ಹಾಗೂ ಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಜ್ಜನರಾದವರು ತಾವು ಪಡೆದ ಉಪಕಾರವನ್ನು ಎಂದೂ ಮರೆಯಲ್ಲ. ಇಂದು ಈ ಕೆಲಸವನ್ನು ಜಾನಪದ ಪರಿಷತ್ ಮತ್ತು ಸಾಹಿತ್ಯ ಅಕಾಡೆಮಿ ಮಾಡಿದೆ. ದೇಜಗೌ ಕುರಿತು ಹೇಳಿದಷ್ಟೂ ಸಾಲಲ್ಲ. ಅವರು ಒಂದು ಶತಮಾನದ ಅವಧಿಯನ್ನು ಕಂಡವರು. ವಿದ್ಯಾಭ್ಯಾಸವನ್ನಷ್ಟೇ ಕಲಿಸಿದವರಲ್ಲ. ಬದುಕು ಹೇಗೆ ನಡೆಯಬೇಕು ಎಂಬುದನ್ನು ಕಲಿಸಿದವರು ಎಂದರು.
ಹಿಂದೆ ನಡೆದ ಘಟನೆಯನ್ನು ನೆನಪಿಸಿಕೊಂಡ ಕಮಲಾ ಹಂಪನಾ, ಒಮ್ಮೆ ಕನ್ನಡ ಸಾಹಿತ್ಯ ಪರಿಷತ್ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಹಂಪನಾ ಮತ್ತು ದೇಜಗೌ ಇಬ್ಬರೂ ಸ್ಪರ್ಧಿಸಿದ್ದರು. ಗುರು ಶಿಷ್ಯರ ಪೈಪೋಟಿ ನಡೆದಿತ್ತು. ಫಲಿತಾಂಶ ಬಂತು, ಹಂಪನಾ ಚುನಾಯಿತರಾದರು. ಗುರುಗಳು ಸೋತರಲ್ಲ ಎಂದು ನನಗೆ ದುಃಖವಾಯಿತು. ಮರುದಿನ ಎಲ್ಲ ಪತ್ರಿಕೆಗಳು ಹಂಪನಾ ಅವರನ್ನು ಕೊಂಡಾಡಿದರು. ನಾಲ್ಕೈದು ಜನ ನಮ್ಮ ಮನೆಗೆ ಹಂಪನಾ ಅವರನ್ನು ಅಭಿನಂದಿಸಲು ಬಂದಿದ್ದರು. ದೇಜಗೌ ಕೂಡ ಬಂದಿದ್ದರು. ಬಂದವರೇ ಕಮಲಾ ಸ್ವಲ್ಪ ಹಾಲು ತಗೊಂಡು ಬಾರಮ್ಮ ಎಂದು ಹಾಲು ತರಿಸಿಕೊಂಡು ಕುಡಿದರು. ನನ್ನ ಶಿಷ್ಯ ಗೆದ್ದಿರುವುದಕ್ಕೆ ಹಾಲು ಕುಡಿದಷ್ಟೇ ಸಂತೋಷವಾಯಿತು. ಅದಕ್ಕೆ ಹಾಲು ಕುಡಿದೆ ಎಂದಿದ್ದರು. ಇಂತಹ ಸಂಸ್ಕೃತಿಯ ವ್ಯಕ್ತಿಯನ್ನು ಎಷ್ಟು ಕೊಂಡಾಡಿದರೂ ಸಾಲದು ಎಂದು ಹೇಳಿದರು.
ಅವರು ರಾತ್ರಿ ಒಂದು ಗಂಟೆಯಾದರೂ ನಿದ್ರೆ ಮಾಡುತ್ತಿರಲಿಲ್ಲ. ಅವರಷ್ಟು ಅಧ್ಯಯನ ಶೀಲರು ಮತ್ತೊಬ್ಬರಿಲ್ಲ. ಸಂಪೂರ್ಣವಾಗಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ತಾವು ಬೆಳೆದಿದ್ದಷ್ಟೇ ಅಲ್ಲ, ಅನೇಕರನ್ನು ಬೆಳೆಸಿದವರು. ಅವರನ್ನು ನೆನಪಿಸಿ ಗೌರ ತೋರುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಅವರು ನಮಗೆ ಶಬ್ದಮಣಿ ದರ್ಪಣ ಪಾಠ ಮಾಡಿದ ಗುರುಗಳು. ಪಾಠ ಮಾಡುವ ಐದತ್ತು ನಿಮಿಷ ಮೊದಲು ಕನ್ನಡ ನಾಡು-ನುಡಿಯ ಕುರಿತು ಮಾತನಾಡದೇ ಪಾಠ ಮಾಡುತ್ತಿರಲಿಲ್ಲ. ಲೋಕಸೇವಾ ಆಯೋಗದಲ್ಲಿ ಕನ್ನಡದ ಸುಳಿವೇ ಇರಲಿಲ್ಲ. ಹೋರಾಟ ಮಾಡಿ ಅಲ್ಲಿ ಕನ್ನಡ ಪ್ರವೇಶ ಮಾಡಿಸಿದ್ದರು. ದೇವರಿದ್ದಾನೋ ಇಲ್ಲವೋ ನನಗೆ ಕಲ್ಪನೆಯಿಲ್ಲ. ಆದರೆ ತಂದೆ ತಾಯಿ, ವಿದ್ಯೆ ಕಲಿಸಿದ ನಾಲ್ವರು ಗುರುಗಳು ನನಗೆ ದೇವರು ಎಂದು ಕಮಲಾ ಹಂಪನಾ ತಿಳಿಸಿದರು. ಅವರು ಕನ್ನಡ ನಾಡು ನುಡಿಯ ಕುರಿತು ದಟ್ಟಪ್ರೇಮವನ್ನು ಹೊಂದಿದ್ದರು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಟಿ.ತಿಮ್ಮೇಗೌಡ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ, ಸಾಹಿತಿ ಡಾ.ಸಿ.ನಾಗಣ್ಣ, ಡಾ.ಸಿಪಿಕೆ, ಅಕಾಡೆಮಿ ರಿಜಿಸ್ಟ್ರಾರ್ ಎನ್.ಕರಿಯಪ್ಪ,ಸದಸ್ಯ ಸಂಚಾಲಕ ಡಾ.ಎನ್.ಎಂ.ತಳವಾರ್ ಮತ್ತಿತರರು ಉಪಸ್ಥಿತರಿದ್ದರು.







