ರಫೇಲ್ ಒಪ್ಪಂದ: ಮಹಾಲೇಖಪಾಲರ ಲೆಕ್ಕ ಪರಿಶೋಧನೆಗೆ ಕಾಂಗ್ರೆಸ್ ಆಗ್ರಹ

ಹೊಸದಿಲ್ಲಿ, ಅ. 4: ರೂಪಾಯಿ 60,150 ಕೋಟಿಯ ರಫೇಲ್ ಯುದ್ಧ ವಿಮಾನ ಒಪ್ಪಂದದ ವಿಧಿ ವಿಧಾನದ ಲೆಕ್ಕ ಪರಿಶೋಧನೆ ನಡೆಸುವಂತೆ ಹಾಗೂ ಗುತ್ತಿಗೆಯಲ್ಲಿ ನಡೆದ ಭ್ರಷ್ಟಾಚಾರಕ್ಕೆ ಉತ್ತರದಾಯಿಯ ಗುರುತು ಸಂಸತ್ತಿಗೆ ಲಭ್ಯವಾಗುವಂತೆ ಎಲ್ಲ ವಾಸ್ತವ ವಿಚಾರಗಳನ್ನು ದಾಖಲಿಸುವಂತೆ ಕಾಂಗ್ರೆಸ್ ಗುರುವಾರ ಮಹಾಲೇಖಪಾಲರನ್ನು ಆಗ್ರಹಿಸಿದೆ.
ಕಾಂಗ್ರೆಸ್ ನೇತೃತ್ವದ ನಾಯಕರ ನಿಯೋಗ ಭಾರತದ ಮಹಾಲೇಖಪಾಲ ರಾಜೀವ್ ಮೆಹ್ರಿಷಿ ಅವರನ್ನು ಗುರುವಾರ ಭೇಟಿಯಾಗಿದೆ. ರಫೇಲ್ ಒಪ್ಪಂದದ ಕುರಿತಂತೆ ಮಹಾಲೇಖ ಪಾಲರನ್ನು ನಿಯೋಗ ಎರಡನೇ ಬಾರಿ ಭೇಟಿಯಾಗುತ್ತಿದೆ. ಈ ಸಂದರ್ಭ ನಿಯೋಗ ಮಹಾಲೇಖಪಾಲರಿಗೆ ಹೊಸ ದಾಖಲೆಗಳೊಂದಿಗೆ ಜ್ಞಾಪನಾ ಪತ್ರವನ್ನು ನೀಡಿದೆ. ರಫೇಲ್ ಒಪ್ಪಂದದ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಲು ಪಕ್ಷ ಸೆಪ್ಟಂಬರ್ 19ರಂದು ಮಹಾಲೇಖಪಾಲರನ್ನು ಭೇಟಿಯಾಗಿತ್ತು. ಅನಂತರ ಸೆಪ್ಟಂಬರ್ 24ರಂದು ಕೇಂದ್ರ ವಿಚಕ್ಷಣಾ ಆಯೋಗವನ್ನು ಭೇಟಿಯಾಗಿತ್ತು. ಈ ಹಿಂದೆ ರಫೇಲ್ ಭ್ರಷ್ಟಾಚಾರದ ಕುರಿತು ಮಹಾಲೇಖಪಾಲರಿಗೆ ಮನವಿ ಮಾಡಿದ್ದ ಬಳಿಕ ಕಾಂಗ್ರೆಸ್, ದಾಖಲೆಗಳು, ಭಾರತ ಹಾಗೂ ಫ್ರಾನ್ಸ್‌ನಲ್ಲಿನ ಹೇಳಿಕೆಯ ವರದಿಗಳು ಆಳಕ್ಕಿಳಿದ ದುಷ್ಟ ತಂತ್ರ ಹಾಗೂ ಸರಕಾರಿ ಬೊಕ್ಕಸಕ್ಕೆ ಉಂಟಾದ ನಷ್ಟವನ್ನು ಬಹಿರಂಗಪಡಿಸಿತ್ತು ಎಂದಿತ್ತು.





