ಕಾಂಗ್ರೆಸ್ ಸೇರಲು ನಿರ್ಧರಿಸಿದ ಮೋದಿಯನ್ನು ಹೋಲುವ ಅಭಿನಂದನ್
2014ರ ಚುನಾವಣೆ ಸಂದರ್ಭ ಬಿಜೆಪಿ ಪರ ಪ್ರಚಾರ ನಡೆಸಿ ಸುದ್ದಿಯಾಗಿದ್ದ ವ್ಯಕ್ತಿ
ಲಕ್ನೋ, ಅ.4: ಪ್ರಧಾನಿ ನರೇಂದ್ರ ಮೋದಿಯನ್ನು ಹೋಲುವ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದ ಅಭಿನಂದನ್ ಪಾಥಕ್ ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ ವಿರುದ್ಧ ಪ್ರಚಾರಕ್ಕೆ ಮುಂದಾಗಿದ್ದಾರೆ.
2014ರ ಚುನಾವಣೆಯ ಸಂದರ್ಭ ಸುದ್ದಿಯಾಗಿದ್ದ ಇವರು ಹಲವು ಸಂದರ್ಭಗಳಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ್ದರು. 2018ರ ಮಾರ್ಚ್ ನಲ್ಲಿ ನಡೆದ ಗೋರಖ್ ಪುರ ಉಪಚುನಾವಣೆಯಲ್ಲೂ ಬಿಜೆಪಿ ಪರ ಇವರು ಪ್ರಚಾರ ನಡೆಸಿದ್ದರು.
“ಮೋದಿ ಏನು ಹೇಳುತ್ತಾರೆ ಮತ್ತು ಆಲೋಚಿಸುತ್ತಾರೆ ಅದಕ್ಕೆ ವಿರುದ್ಧವಾಗಿ ಬಿಜೆಪಿ ಕೆಲಸ ಮಾಡುತ್ತಿದೆ. ಅಚ್ಛೇ ದಿನ್ ಯಾವಾಗ ಬರುತ್ತದೆ ಎಂದು ಜನರು ನನ್ನನ್ನು ಪ್ರಶ್ನಿಸುತ್ತಿದ್ದಾರೆ” ಎಂದವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಆಡಳಿತ ವೈಫಲ್ಯದಿಂದ ಜನರು ಮೋದಿಯನ್ನೇ ಹೋಲುವ ತನ್ನನ್ನು ಪ್ರಶ್ನಿಸುತ್ತಿದ್ದಾರೆ ಎನ್ನುವ ಅವರು, “ಕಾಂಗ್ರೆಸ್ ಪರ ಹಾಗು ಬಿಜೆಪಿ ವಿರುದ್ಧ ನಾನು 2019ರ ಚುನಾವಣೆಯಲ್ಲಿ ಪ್ರಚಾರ ನಡೆಸಲು ನಿರ್ಧರಿಸಿದ ನಂತರ ಕೆಲವರು ನನಗೆ ಹಲ್ಲೆ ನಡೆಸುತ್ತಿದ್ದಾರೆ” ಎಂದು ಆರೋಪಿಸುತ್ತಾರೆ.
“ಕಾಂಗ್ರೆಸ್ ಪರ ಕೆಲಸ ಮಾಡಲು ನಾನು ಬಯಸಿದ್ದೇನೆ” ಎಂದವರು ಹೇಳುತ್ತಾರೆ.