ರಶ್ಯದಿಂದ ಶಸ್ತ್ರ ಖರೀದಿಸಿದರೆ ದಿಗ್ಬಂಧನ: ಭಾರತಕ್ಕೆ ಅಮೆರಿಕ ಎಚ್ಚರಿಕೆ

ವಾಶಿಂಗ್ಟನ್, ಅ. 4: ರಶ್ಯದ ಎಸ್-400 ವಾಯು ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆ ಸೇರಿದಂತೆ ಆ ದೇಶದಿಂದ ಸೇನಾ ಸಾಮಗ್ರಿಗಳನ್ನು ಖರೀದಿಸುವ ದೇಶಗಳು ಪರೋಕ್ಷ ಆರ್ಥಿಕ ದಿಗ್ಬಂಧನಗಳನ್ನು ಬೇಡುತ್ತವೆ ಎಂದು ಅಮೆರಿಕ ಎಚ್ಚರಿಸಿದೆ.
ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗುರುವಾರ ಭಾರತ ಪ್ರವಾಸ ಆರಂಭಿಸಲಿದ್ದು, ಭಾರತದೊಂದಿಗೆ 5 ಬಿಲಿಯ ಡಾಲರ್ (ಸುಮಾರು 36,800 ಕೋಟಿ ರೂಪಾಯಿ)ಗೂ ಅಧಿಕ ಮೊತ್ತದ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ.
ಅಮೆರಿಕ ಇತ್ತೀಚೆಗೆ ಅಂಗೀಕರಿಸಿರುವ ‘ಅಮೆರಿಕದ ವಿರೋಧಿಗಳನ್ನು ದಿಗ್ಬಂಧನದ ಮೂಲಕ ಎದುರಿಸುವ ಕಾಯ್ದೆ’ (ಸಿಎಎಟಿಎ)ಯಡಿಯಲ್ಲಿ ರಶ್ಯದ ವಿರುದ್ಧ ವ್ಯವಹಾರ ಮಾಡುವ ದೇಶಗಳ ವಿರುದ್ಧ ದಿಗ್ಬಂಧನಗಳನ್ನು ವಿಧಿಸಲು ಅದಕ್ಕೆ ಅವಕಾಶವಿದೆ.
2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ನಡೆಸಿದೆಯೆನ್ನಲಾದ ಹಸ್ತಕ್ಷೇಪ, ಸಿರಿಯ ಸಂಘರ್ಷದಲ್ಲಿ ಅದು ವಹಿಸುತ್ತಿರುವ ಪಾತ್ರ ಮತ್ತು ಯುಕ್ರೇನ್ ಭಾಗವಾಗಿದ್ದ ಕ್ರೈಮಿಯ ಪ್ರಾಂತವನ್ನು ರಶ್ಯಕ್ಕೆ ಸೇರಿಸಿರುವುದಕ್ಕಾಗಿ ರಶ್ಯವನ್ನು ಶಿಕ್ಷಿಸಲು ಅಮೆರಿಕ ಈ ಕಾಯ್ದೆಯನ್ನು ಅಂಗೀಕರಿಸಿರುವುದನ್ನು ಸ್ಮರಿಸಬಹುದಾಗಿದೆ.
ರಶ್ಯ ಅಧ್ಯಕ್ಷರ ಭಾರತ ಭೇಟಿಯ ವೇಳೆ ಐದು ಎಸ್-400 ಕ್ಷಿಪಣಿ ವ್ಯವಸ್ಥೆಗಳನ್ನು ಖರೀದಿಸಲು ಭಾರತ ಉದ್ದೇಶಿಸಿತ್ತು ಎನ್ನಲಾಗಿದೆ. ಆದರೆ, ಅಮೆರಿಕದ ಈ ಬೆದರಿಕೆಯು ಭಾರತವನ್ನು ಗೊಂದಲದಲ್ಲಿ ಸಿಲುಕಿಸಲಿದೆ.
‘‘ರಶ್ಯದೊಂದಿಗೆ ವ್ಯವಹಾರ ಮಾಡದಂತೆ ನಮ್ಮ ಎಲ್ಲ ಮಿತ್ರರು ಮತ್ತು ಭಾಗೀದಾರರನ್ನು ನಾವು ಒತ್ತಾಯಿಸುತ್ತೇವೆ. ಅದು ಸಿಎಎಟಿಎ ಕಾಯ್ದೆಯಡಿ ಆರ್ಥಿಕ ದಿಗ್ಬಂಧನಗಳಿಗೆ ಕಾರಣವಾಗುತ್ತದೆ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರರೊಬ್ಬರು ತಿಳಿಸಿದರು.
ದಿಗ್ಬಂಧನ ವಿನಾಯಿತಿಗೂ ಅವಕಾಶ
ಆದಾಗ್ಯೂ, ರಶ್ಯದೊಂದಿಗೆ ಮಾಡಿಕೊಳ್ಳುವ ಒಪ್ಪಂದವು ಅಮೆರಿಕ ಮತ್ತು ಅದರ ಮಿತ್ರದೇಶಗಳಿಗೆ ಬೆದರಿಕೆಯಲ್ಲದಿದ್ದರೆ ಹಾಗೂ ಖರೀದಿದಾರ ದೇಶವು ರಶ್ಯದಿಂದ ಮಾಡಿಕೊಳ್ಳುವ ಶಸ್ತ್ರಾಸ್ತ್ರ ಆಮದನ್ನು ಹಾಗೂ ರಶ್ಯದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿರುವುದಕ್ಕೆ ಪುರಾವೆಗಳಿದ್ದರೆ, ಅಮೆರಿಕದ ಅಧ್ಯಕ್ಷರು ಆ ದೇಶಗಳಿಗೆ ದಿಗ್ಬಂಧನದಿಂದ ವಿನಾಯಿತಿ ನೀಡಬಹುದಾಗಿದೆ.
ವಿನಾಯಿತಿಗೆ ಅಮೆರಿಕ ಕಾಂಗ್ರೆಸ್ ಅನುಮೋದನೆ ನೀಡಬೇಕಾಗಿದೆ.







