ಬೇಜವಾಬ್ದಾರಿಯುತ’ ಹೇಳಿಕೆಗಳನ್ನು ನೀಡಬೇಡಿ: ಪಾಕ್ ರಾಜಕಾರಣಿಗಳಿಗೆ ಸೇನೆ ಕಡಕ್ ಎಚ್ಚರಿಕೆ

ಇಸ್ಲಾಮಾಬಾದ್, ಅ. 4: ನಮ್ಮ ವಿರುದ್ಧ ‘ಬೇಜವಾಬ್ದಾರಿಯುತ’ ಹೇಳಿಕೆಗಳನ್ನು ನೀಡಬಾರದು ಎಂದು ಪಾಕಿಸ್ತಾನದ ರಾಜಕಾರಣಿಗಳಿಗೆ ಸೇನೆ ಎಚ್ಚರಿಕೆ ನೀಡಿದೆ ಹಾಗೂ ಇಂಥ ಹೇಳಿಕೆಗಳು ದೇಶದ ಸ್ಥಿರತೆಗೆ ‘ಮಾರಕ’ ಎಂದು ಹೇಳಿದೆ.
ನನ್ನ ಪಕ್ಷವು ‘ವ್ಯವಸ್ಥೆ’ಯೊಂದಿಗೆ ‘ಒಪ್ಪಂದ’ವೊಂದನ್ನು ಮಾಡಿಕೊಂಡಿದೆ ಹಾಗೂ ಇದರನ್ವಯ, ರಾಜಕೀಯವಾಗಿ ಮಹತ್ವದ ರಾಜ್ಯ ಪಂಜಾಬ್‌ನಲ್ಲಿ ಕೆಲವೇ ತಿಂಗಳುಗಳಲ್ಲಿ ಅದು ಸರಕಾರ ರಚಿಸಲಿದೆ ಎಂಬುದಾಗಿ ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಝ್ ಪಕ್ಷದ ನಾಯಕ ರಾಣಾ ಮಶೂದ್ ಹೇಳಿಕೆ ನೀಡಿದ ಬಳಿಕ, ಸೇನೆ ಈ ಕಟು ಎಚ್ಚರಿಕೆ ನೀಡಿದೆ.
ಮಶೂದ್‌ರ ಹೇಳಿಕೆಗೆ ಪ್ರತಿಕ್ರಿಯಿಸಿದ ಸೇನಾ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್, ‘‘ಅವರ ಹೇಳಿಕೆ ಆಧಾರರಹಿತ ಹಾಗೂ ವಿಷಾದನೀಯ’’ ಎಂದರು.
‘‘ಸ್ಥಾಪಿತ ಹಿತಾಸಕ್ತಿ ಕುರಿತ ಹೇಳಿಕೆಯೊಂದನ್ನು ರಾಣಾ ಮಶೂದ್ ನೀಡಿರುವುದು ಆಧಾರರಹಿತ ಹಾಗೂ ವಿಷಾದನೀಯ. ಇಂಥ ಬೇಜವಾಬ್ದಾರಿಯುತ ಹೇಳಿಕೆಗಳು ದೇಶದ ಸ್ಥಿರತೆಗೆ ಮಾರಕವಾಗಿವೆ’’ ಎಂದು ಗುಪ್ತಚರ ಸಂಸ್ಥೆ ಐಎಸ್‌ಐನ ಮಹಾನಿರ್ದೇಶಕ ಮಂಗಳವಾರ ರಾತ್ರಿ ಟ್ವಿಟರ್‌ನಲ್ಲಿ ಹೇಳಿದ್ದಾರೆ.





