ಕೆ.ಆರ್.ಪೇಟೆ: ಕುಡಿದ ಅಮಲಿನಲ್ಲಿ ಬಿದ್ದು ಗಾಯಗೊಂಡ ಯುವಕ ಸಾವು
ಕೆ.ಆರ್.ಪೇಟೆ, ಅ.4: ತಾಲೂಕಿನ ಮಡವಿನಕೊಡಿ ಗ್ರಾಮದಲ್ಲಿ ಯುವಕನೊಬ್ಬ ಕುಡಿದು ತೂರಾಡುತ್ತ ಮನೆಬಾಗಲಿಗೆ ಬಂದು ಬಿದ್ದ ಪರಿಣಾಮ ಕಲ್ಲಿಗೆ ತಲೆ ಬಡಿದು ಅತೀವ ರಕ್ತಸ್ರಾವದಿಂದ ಮೃತಪಟ್ಟಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ಗ್ರಾಮದ ಸುರೇಶ್ ಎಂಬುವರ ಮಗ ಜಗನ್(26) ಮೃತಪಟ್ಟ ಯುವಕ. ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಜಗನ್ ಮದ್ಯವ್ಯಸನಿಯಾಗಿದ್ದು, ಬುಧವಾರ ತಡರಾತ್ರಿ ಮಧ್ಯಪಾನ ಮಾಡಿಕೊಂಡು ತೂರಾಡಿಕೊಂಡು ಮನೆಗೆ ಬರುವಾಗ ಮನೆ ಬಾಗಿಲ ಬಳಿ ಬಿದ್ದು ತಲೆಗೆ ಪೆಟ್ಟಾಗಿದೆ. ಕುಟುಂಬದ ಸದಸ್ಯರು ರಕ್ತ ತಡೆಯುವಂತೆ ಅರಿಸಿನ ಪುಡಿ ಹಾಕಲು ಹೋದಾಗ ಬೇಡ ಎಂದು ನಿರಾಕರಿಸಿದ್ದ ಎನ್ನಲಾಗಿದೆ.
ನನ್ನ ಬಟ್ಟೆ ಕೊಡಿ ಬೆಂಗಳೂರಿಗೆ ಹೋಗುತ್ತೇನೆ ಎಂದು ಹೋಗಿ ಪಕ್ಕದ ಹೊಸಕೋಟೆಯ ಜನತಾ ಕಾಲನಿ ಗಣೇಶ್ ಪೆಂಡಾಲ್ ಹತ್ತಿರ ಹೋಗಿದ್ದಾನೆ. ಬಳಿಕ ವಾಂತಿ ಮಾಡಿಕೊಳ್ಳತ್ತಿದ್ದು, ಅಲ್ಲಿದ್ದ ಸ್ನೇಹಿತ ರಘು ಎಂಬಾತ ವಿಷಯವನ್ನು ಜಗನ್ ಸಹೋದರ ಜೀವನ್‍ಗೆ ತಿಳಿಸಿದ್ದಾರೆ. ಜೀವನ್ ಹೋಗಿ ಅವರ ಸಹೋದರ ಜಗನ್‍ನನ್ನು ಆಸ್ಪತ್ರೆಗೆ ಸ್ನೇಹಿತರಾದ ಬಾಬು ಮತ್ತು ಇತರರೊಂದಿಗೆ ಕರೆದೊಯ್ಯುವಾಗ ಮಾರ್ಗಮಧ್ಯೆದಲ್ಲಿ ಜಗನ್ ಮೃತಪಟ್ಟಿದ್ದಾನೆ ಎಂದು ಮೃತರ ತಂದೆ ಸುರೇಶ್ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗುರುವಾರ ಬೆಳಗ್ಗೆ ಈ ಘಟನೆ ಸಂಬಂಧ ಸಾಮಾಜಿಕ ಜಾಲಾತಾಣದಲ್ಲಿ ಯುವಕರ ಗುಂಪುಗಳ ನಡುವೆ ಘರ್ಷಣೆ ಆಗಿ ಯುವಕ ಜಗನ್ ಕಗ್ಗೊಲೆ ಆಗಿದೆ ಎಂದು ಸುದ್ದಿ ವೈರಲ್ ಆಗಿತ್ತು. ಬಳಿಕ ಸ್ಥಳಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ವೆಂಕಟೇಶಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತರ ತಂದೆಯ ಬಳಿ ಪ್ರಕರಣದ ಸಂಬಂಧ ಮಾಹಿತಿ ತೆಗೆದುಕೊಂಡಿದ್ದಾರೆ.
ಮೃತರ ತಂದೆ ಸುರೇಶ್ ತನ್ನ ಮಗನದ್ದು ಅಸ್ವಾಭಾವಿಕ ಸಾವು ಎಂದು ದೂರು ನೀಡಿದ್ದಾರೆ. ಈಗ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ವೈದ್ಯರ ಅಭಿಪ್ರಾಯದ ಮೇಲೆ ಇದು ಕೊಲೆಯೋ ಅಥವಾ ಅಸ್ವಾಭಾವಿಕ ಸಾವೋ ಎಂದು ತಿಳಿಯಲಿದೆ ಎಂದು ಸಿಪಿಐ ವೆಂಕಟೇಶಯ್ಯ ತಿಳಿಸಿದ್ದಾರೆ.