ಅಂತರ್ ಕಾಲೇಜು ಪುರುಷರ ಕಬಡ್ಡಿ: ಚಿಕ್ಕಮಗಳೂರು ಪ್ರಥಮ, ಶಿರಾಳಕೊಪ್ಪ ದ್ವಿತೀಯ
ಕೊಪ್ಪ, ಅ.4: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಕುವೆಂಪು ವಿವಿ ಅಂತರ್ ಕಾಲೇಜು ಮಟ್ಟದ ಪುರುಷ ಕಬಡ್ಡಿ ಪಂದ್ಯಾವಳಿಯಲ್ಲಿ ಅನಿಲ್ ಕುಮಾರ್ ನೇತೃತ್ವದ ಚಿಕ್ಕಮಗಳೂರಿನ ಐಡಿಎಸ್‍ಜಿ ಸರಕಾರಿ ಪ್ರಥಮ ದರ್ಜೆ ಕಾಲೇಜು ತಂಡ ಓಂಪ್ರಕಾಶ್ ನೇತ್ರತ್ವದ ಶಿರಾಳಕೊಪ್ಪದ ಕದಂಬ ಪ್ರಥಮ ದರ್ಜೆ ಕಾಲೇಜು ತಂಡವನ್ನು 53-26 ಅಂಕಗಳಿಂದ ಸೋಲಿಸಿ ಪ್ರಶಸ್ತಿ ಪಡೆದುಕೊಂಡಿತು. ಸತತ ಮೂರನೇ ವರ್ಷವೂ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಚಿಕ್ಕಮಗಳೂರು ತಂಡ ಹ್ಯಾಟ್ರಿಕ್ ಸಾಧನೆ ಮಾಡಿದೆ.
3 ಮತ್ತು 4ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಆದರ್ಶ ನೇತೃತ್ವದ ಸೊರಬ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡ ಕಾರ್ತಿಕ್ ನೇತೃತ್ವದ ಕಡೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡವನ್ನು 26-16 ಅಂಕಗಳಿಂದ ಸೋಲಿಸಿತು.
ಮಂಗಳವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕುವೆಂಪು ವಿವಿ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ನಾಗರಾಜು ಪ್ರಶಸ್ತಿ ವಿತರಣೆ ಮಾಡಿದರು. ಕಾಲೇಜು ಪ್ರಾಚಾರ್ಯ ಎಸ್. ಅನಂತ್ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಎಸ್.ಎಂ. ಪ್ರಕಾಶ್, ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಬಿ.ಎಸ್. ವೆಂಕಟೇಶ್ ಮೂರ್ತಿ, ಅಮೆಚೂರ್ ಕಬಡ್ಡಿ ಅಸೋಸಿಯೇಷನ್‍ನ ತಾಲೂಕು ಸಂಘಟನಾ ಕಾರ್ಯದರ್ಶಿ ಜೆ. ಸಂಪತ್ ಮುಂತಾದವರು ಉಪಸ್ಥಿತರಿದ್ದರು.







