ಮಂಗಳೂರು: ‘ಜನರ ಬಳಿಗೆ ಮೂಡಾ’ ಯೋಜನೆ
ಮಂಗಳೂರು, ಅ.4: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ)ದ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಮೂಡಾ ಅದಾಲತ್‌ನಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಸಂದರ್ಭ ಪ್ರಾಧಿಕಾರದಿಂದ ನೀಡುವ ಅನುಮೋದನೆಗಳು ಸಕಾಲದಲ್ಲಿ ಸಿಗುವಂತೆ ಮಾಡಲು ‘ಜನರ ಬಳಿಗೆ ಮೂಡಾ’ ಯೋಜನೆ ಯನ್ನು ಹಮ್ಮಿಕೊಳ್ಳಲಾಗಿದೆ.
ಗ್ರಾಮಾಂತರ ಪ್ರದೇಶದ ಜನರು ಮೂಡಾ ಕಚೇರಿಗೆ ಬಂದು ಹೋಗುವ ಬದಲು ಮೂಡಾ ಅಧಿಕಾರಿಗಳೇ ಜನರ ಬಳಿಗೆ ತೆರಳಿ, ಅವರ ಸಮಸ್ಯೆಗಳಿಗೆ ಪರಿಹಾರ ನೀಡುವ ಯೋಜನೆಯನ್ನು ಕೈಗೊಳ್ಳಲು ಆ.4ರಂದು ನಡೆದ ‘ಮೂಡಾ ಅದಾಲತ್’ನಲ್ಲಿ ಸಚಿವ ಖಾದರ್ ನಿರ್ದೇಶಿಸಿದ್ದರು.
ಈ ನಿಟ್ಟಿನಲ್ಲಿ ಮೂಡಾ ವ್ಯಾಪ್ತಿ ಬರುವ ಗ್ರಾಮಾಂತರ ಪ್ರದೇಶಗಳಿಗೆ ಸಂಬಂಧಿಸಿದಂತೆ ತಿಂಗಳಿನ ಮೊದಲನೇ ಶನಿವಾರದಂದು ಗ್ರಾಮಾಂತರ ಪ್ರದೇಶ ಕೇಂದ್ರಸ್ಥಾನಗಳಾದ ಮುಲ್ಕಿ, ಬಜ್ಪೆ ಹಾಗೂ ಉಳ್ಳಾಲಗಳಲ್ಲಿ ಮೂಡಾದ ಎಲ್ಲ ಅಧಿಕಾರಿ, ಸಿಬ್ಬಂದಿ ಭೇಟಿ ನೀಡಲಿದ್ದಾರೆ.
ಈ ಸಂದರ್ಭ ಸಾರ್ವಜನಿಕರಿಂದ ಮೂಡಾಕ್ಕೆ ಸಂಬಂಧಿಸಿದಂತೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಸಾರ್ವಜನಿಕರು ಈ ಸಂಬಂಧ ಮೂಡಾಕ್ಕೆ ಸಲ್ಲಿಸುವ ಅರ್ಜಿ, ಮನವಿಗಳನ್ನು ನಿಗದಿತ ಕಚೇರಿಗಳಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಸಲ್ಲಿಸಲು ಮೂಡಾ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







