ಮೈಸೂರು: 80 ಕುರಿಗಳ ನಿಗೂಢ ಸಾವು
ಮೈಸೂರು,ಅ.5: ಮೈಸೂರು ತಾಲೂಕಿನ ದಡದ ಹಳ್ಳಿಯಲ್ಲಿ ಸುಮಾರು 80 ಕುರಿಗಳು ನಿಗೂಢವಾಗಿ ಸಾವನ್ನಪ್ಪಿವೆ. ಕುರಿಗಳ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎನ್ನಲಾಗಿದೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನಿಂದ ಬಂದಿರುವ ಕುರಿಗಾಹಿಗಳು ದಡದಹಳ್ಳಿಯಲ್ಲಿ ಖಾಲಿ ಇರುವ ಖಾಸಗಿ ಬಡಾವಣೆಯಲ್ಲಿ ಬೀಡುಬಿಟ್ಟಿದ್ದು, ನಿನ್ನೆ ಏಕಾಏಕಿ ಕುರಿಗಳ ಸರಣಿ ಸಾವು ಸಂಭವಿಸಿದೆ. ಇದರಿಂದ ಲಕ್ಷಾಂತರ ರೂ.ನಷ್ಟ ಸಂಭವಿಸಿದ್ದು, ಕುರಿಗಳ ಮಾಲಕ ಅನಂತು ಆತಂಕಕ್ಕೆ ಒಳಗಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪಶುಸಂಗೋಪನಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವಿನ ನಿಖರ ಕಾರಣ ತಿಳಿಯಲು ಮೃತ ಕುರಿಗಳ ದೇಹದಿಂದ ರಕ್ತದ ಮಾದರಿಯನ್ನು ಪಶು ವೈದ್ಯಕೀಯ ಸಂಸ್ಥೆಗೆ ಕಳುಹಿಸಿಕೊಡಲಾಗಿದೆ. ವರದಿಯ ನಂತರವಷ್ಟೇ ಸತ್ಯಾಂಶ ಹೊರಬೀಳಲಿದೆ ಎಂದು ಹೇಳಿದ್ದಾರೆ.
Next Story