ಉದ್ಯಮಶೀಲತೆ, ಆರ್ಥಿಕ ಸಬಲತೆ ಮತ್ತು ಕೌಶಲ್ಯ ಅಭಿವೃದ್ಧಿಗೆ ‘ಉನ್ನತಿ’
ಪ.ಜಾತಿ, ಪ.ವರ್ಗಗಳ ಉದ್ಯಮಿಗಳಿಗೆ ರಾಷ್ಟ್ರದಲ್ಲೇ ಪ್ರಪ್ರಥಮ ಬಾರಿಗೆ ವಿನೂತನ ಯೋಜನೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಅ. 5: ಸಮಾಜದ ದುರ್ಬಲ ಸಮುದಾಯಕ್ಕೆ ಅನುಕೂಲ ಆಗುವಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯಮಶೀಲತೆ, ಆರ್ಥಿಕ ಸಬಲತೆ ಮತ್ತು ಕೌಶಲ್ಯ ಅಭಿವೃದ್ಧಿಗೆ ಸಮಾಜ ಕಲ್ಯಾಣ ಇಲಾಖೆ ರಾಷ್ಟ್ರದಲ್ಲೇ ಪ್ರಪ್ರಥಮ ಬಾರಿಗೆ ‘ಉನ್ನತಿ’ ಎಂಬ ವಿನೂತನ ಯೋಜನೆಯೊಂದನ್ನು ಪ್ರಾರಂಭಿಸಿದೆ.
ಈ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಉದ್ಯಮಿಗಳಿಗೆ ನವೋದ್ಯಮಗಳನ್ನು ಸ್ಥಾಪಿಸಲು ಆರಂಭಿಕ ಅಗತ್ಯತೆಗಳನ್ನು ಪೂರೈಸುವ ಪರಿಕಲ್ಪನೆ ಹೊಂದಲಾಗಿದೆ. ಅಲ್ಲದೆ, ಆಯ್ಕೆಗೊಳ್ಳುವ ಉದ್ಯಮಿಗೆ ಗರಿಷ್ಠ 50ಲಕ್ಷ ರೂ.ಗಳ ವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ.
ತಂತ್ರಜ್ಞಾನ ಕ್ಷೇತ್ರದಲ್ಲಿನ ನವೋದ್ಯಮಗಳನ್ನು ಆರಂಭಿಸಲು ಬಯಸುವವರಿಗೆ ಉದ್ಯಮಗಳ ಬಗ್ಗೆ ಮಾಹಿತಿ, ಉತ್ಪನ್ನಗಳ ಪ್ರಾಯೋಗಿಕ ಪರಿಶೀಲನೆ, ವಿಚಾರ ದೃಢೀಕರಣ, ಮೂಲ ಬಂಡವಾಳ ನೀಡಿಕೆ ಹಾಗೂ ಅಂತಿಮವಾಗಿ ಮಾರುಕಟ್ಟೆ ಪ್ರವೇಶವನ್ನು ಒದಗಿಸುವ ಮಹತ್ತರ ಆಶಯವನ್ನು ‘ಉನ್ನತಿ’ ಹೊಂದಿದೆ. ಈ ವಿನೂತನ ಯೋಜನೆಗೆ ಸಮಾಜ ಕಲ್ಯಾಣ ಇಲಾಖೆ 20ಕೋಟಿ ರೂ.ಅನುದಾನ ಒದಗಿಸಲಿದೆ.
ಉನ್ನತಿ ಯೋಜನೆಯಡಿ ತಂತ್ರಜ್ಞಾನ ಆವಿಷ್ಕಾರ ವಿಭಾಗದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಸಮುದಾಯದವರು ಯಾವುದೇ ತಂತ್ರಜ್ಞಾನ ಆಧಾರಿತ ನವೋದ್ಯಮಗಳನ್ನು ಆರಂಭಿಸಬಹುದು. ಏಕವ್ಯಕ್ತಿ, ಸಹಭಾಗಿತ್ವ ಕಂಪೆನಿಗಳು ಈ ಯೋಜನೆಯನ್ನು ಆರಿಸಿಕೊಳ್ಳಬಹುದಿದ್ದು, ಉದ್ಯಮಿಗಳಿಗೆ 50ಲಕ್ಷ ರೂ.ಗಳವರೆಗೆ ಆರ್ಥಿಕ ನೆರವು ನೀಡಲಾಗುವುದು.
ಗ್ರಾಮೀಣ ಅಭಿವೃದ್ಧಿ ಹಾಗೂ ಸಾಮಾಜಿಕ ಪ್ರಭಾವವನ್ನು ಬೀರುವ ಉತ್ಪನ್ನಗಳಿಗೆ ಆಸರೆಯಾಗಲಿರುವ ಯಾವುದೇ ವ್ಯಕ್ತಿ ಆರಂಭಿಸುವ ತಂತ್ರಜ್ಞಾನ ಕ್ಷೇತ್ರದ ನವೋದ್ಯಮಗಳಿಗೆ ಎರಡನೆಯ ವಿಭಾಗದಡಿ ಆರ್ಥಿಕ ನೆರವು ನೀಡಲಾಗುವುದು. ಗ್ರಾಮೀಣ ಉನ್ನತಿ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಮೂಲಕ ಸರಕಾರ ಹಾಗೂ ಸಮಾಜಕ್ಕೆ ಪೂರಕವಾಗುವಂತಹ ತಂತ್ರಜ್ಞಾನ ಘಟಕಗಳು ಈ ಯೋಜನೆಯಡಿ ಹಣಕಾಸು ನೆರವಿಗೆ ಅರ್ಹವಾಗುತ್ತವೆ.
ಸಾಮರ್ಥ್ಯ, ಕಾರ್ಯಸಾಧ್ಯತೆ, ಯೋಜನೆಯ ಬಗ್ಗೆ ಪರಿಕಲ್ಪನೆ, ಯೋಜನೆ ಅನುಷ್ಠಾನದ ಆಸಕ್ತಿ ಸೇರಿ ಇನ್ನಿತರ ವಿಷಯಗಳು ಆಯ್ಕೆ ಮಾನದಂಡಗಳಾಗಿವೆ. ಇಂತಹ ಘಟಕಗಳಿಗೆ ಮೂಲ ಬಂಡವಾಳ ನಿಧಿ ಗರಿಷ್ಠ 5 ಲಕ್ಷ ರೂ.ವರೆಗೂ ನೆರವು ನೀಡಲಾಗುವುದು.
ಬದಲಾವಣೆಗೆ ‘ಉನ್ನತಿ’ ಸಹಕಾರಿ : ‘ಉನ್ನತಿ’ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ತಂತ್ರಜ್ಞಾನದ ಅನ್ವೇಷಣೆಗಳು ತುಂಬಾ ಸರಳ, ಬಹಳ ಮಂದಿ ಈ ಕ್ಷೇತ್ರದಲ್ಲಿ ಮುನ್ನೆಡೆಯುತ್ತಿದ್ದಾರೆ. ಆದರೆ, ಎಸ್ಸಿ- ಎಸ್ಟಿ ಸಮುದಾಯಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ತೊಡಗಿಕೊಳ್ಳುತ್ತಿರುವ ಅವಕಾಶಗಳು ವಿರಳ. ಉನ್ನತಿ ಯೋಜನೆ ಈ ಅಸಮತೋಲನವನ್ನು ತೊಡೆದು ಹಾಕಲಿದೆ. ಈ ಯೋಜನೆಯ ಎರಡನೆ ವಿಭಾಗವು ಗ್ರಾಮೀಣ ಸಮಸ್ಯೆಗಳಿಗೆ ಪರಿಹಾರ ರೂಪಿಸುವಂತಹ ಹಾಗೂ ಸಾಮಾಜಿಕ ಅಸಮತೋಲನ ತೊಡೆದು ಹಾಕುವಂತಹ ಯೋಜನೆಯಾಗಿದೆ. ಸರಕಾರ ಹಾಗೂ ಸಮಾಜದ ನೆರವಿಗೆ ಬರಬಲ್ಲ ಈ ಕಾರ್ಯಕ್ರಮವೂ ವಿನೂತನ ಎಂದು ಅವರು ಹೇಳಿದ್ದಾರೆ.
ಉನ್ನತಿ ಬಹಳ ಸರಳವಾಗಿದೆ. ಹಳೆಯ ಸಮಸ್ಯೆಗಳನ್ನು ಬಗೆಹರಿಸಲು ನಾವು ಹೊಸ ಹೊಸ ವಿಚಾರಗಳನ್ನು ಹುಡುಕುತ್ತಿದ್ದೇವೆ, ತಂತ್ರಜ್ಞಾನವು ಮಾನವನ ಬದುಕು ಹಾಗೂ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಬೇಕು. ತಂತ್ರಜ್ಞಾನದ ಮೂಲಕ ಸಾಮಾಜಿಕ ಬದಲಾವಣೆಯನ್ನು ತರುವಂತಾಗಬೇಕು. ಪ್ರಗತಿಗಾಗಿ ತಂತ್ರಜ್ಞಾನವು ಮಾರ್ಗಗಳನ್ನು ಸೃಷ್ಟಿಸಬೇಕು. ಅದು ಉನ್ನತಿ ಮೂಲಕ ಸಾಧ್ಯವಾಗಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಈಗಾಗಲೇ ಕರ್ನಾಟಕದಲ್ಲಿ ಆರಂಭಗೊಂಡು ನಾಲ್ಕು ವರ್ಷಗಳನ್ನು ಮೀರದ ತಂತ್ರಜ್ಞಾನ ಕಂಪೆನಿಗಳು ಈ ಯೋಜನೆಯಡಿ ಅರ್ಜಿ ಹಾಕಿಕೊಳ್ಳಬಹುದು. ಉದ್ಯಮಗಳಲ್ಲಿ ಕಾರ್ಯ ನಿರ್ವಹಿಸುವ ಕನಿಷ್ಠ ಶೇ.50ರಷ್ಟು ಉದ್ಯೊಗಿಗಳು ರಾಜ್ಯದವರಾಗಿರಬೇಕು. ಬಹುಮುಖ್ಯವಾಗಿ ನವೋದ್ಯಮಗಳನ್ನು ಆರಂಭಿಸುವ ಘಟಕವು ಎಸ್ಸಿ-ಎಸ್ಟಿ ವರ್ಗಗಳ ಪ್ರಧಾನ ಹೂಡಿಕೆದಾರರ ಸಹಭಾಗಿತ್ವವನ್ನು ಹೊಂದಿರಬೇಕು
ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯ ಉನ್ನತ ಆಯ್ಕೆ ಸಮಿತಿಯು ಮೂರು ಹಂತದ ಮೌಲ್ಯಮಾಪನಗಳೊಂದಿಗೆ ಆಯ್ಕೆದಾರರನ್ನು ಅಂತಿಮಗೊಳಿಸುವುದು. ಹೆಚ್ಚಿನ ವಿವರಗಳಿಗೆ ಹಾಗೂ 2018ರ ಅಕ್ಟೋಬರ್ 10ರಿಂದ ದೊರೆಯುವ ಅರ್ಜಿ ನಮೂನೆಗಳನ್ನು ಇಲಾಖೆ ವೆಬ್ಸೈಟ್ www.kalyanakendra.com ಡೌನ್ಲೋಡ್ ಮಾಡಿಕೊಳ್ಳಲು ಅವಲೋಕಿಸಲು ಕೋರಲಾಗಿದೆ.
‘ಸಾಮಾನ್ಯವಾಗಿ ತಂತ್ರಜ್ಞಾನ ಕ್ಷೇತ್ರದ ಹೊಸ ಅನ್ವೇಷಣೆಗಳು ಎಸ್ಸಿ-ಎಸ್ಟಿ ಸಮುದಾಯಗಳು ಮತ್ತು ಇತರ ದುರ್ಬಲ ವಿಭಾಗಗಳನ್ನು ತಡವಾಗಿ ತಲುಪುವುದನ್ನು ನಾವು ನೋಡಿದ್ದೇವೆ. ಯುವ ಉದ್ಯಮಿಗಳು ಬಂಡವಾಳ, ತಾಂತ್ರಿಕ ಜಾಲ ಹಾಗೂ ಮಾರುಕಟ್ಟೆ ಪ್ರವೇಶದ ಕೊರತೆಯಿಂದ ಬಳಲುತ್ತಿದ್ದಾರೆ. ಈ ವ್ಯವಸ್ಥಿತ ಸಮಸ್ಯೆಗಳನ್ನು ಬಗೆಹರಿಸಲು ವಿಶೇಷವಾಗಿ ‘ಉನ್ನತಿ’ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ತಂತ್ರಜ್ಞಾನದ ನೆರವಿನೊಂದಿಗೆ ಸಮರ್ಥನೀಯ ಅಭಿವೃದ್ಧಿ ಹಾಗೂ ಸಮಾಜದ ಉನ್ನತಿಯ ಭರವಸೆ ನೀಡುವ ಈ ಯೋಜನೆಯ ಲಾಭವನ್ನು ಸಮುದಾಯದ ಜನ ಸಮರ್ಪಕವಾಗಿ ಬಳಸಿಕೊಳ್ಳಬೇಕೆಂಬುದು ನನ್ನ ಆಶಯ’
-ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ







