ಶ್ಯಾಮ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣ: ಕಲ್ಲಡ್ಕ ಪ್ರಭಾಕರ್ ಭಟ್‍ಗೆ ವಾರಂಟ್, ರಾಘವೇಶ್ವರ ಸ್ವಾಮೀಜಿಗೆ ಸಮನ್ಸ್

ಪುತ್ತೂರು, ಅ. 5: ಕೆದಿಲ ನಿವಾಸಿ ಶ್ಯಾಮ್ ಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ದೋಷರೋಪಣಾ ಪಟ್ಟಿಯ ಆಧಾರದಲ್ಲಿ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ಬೋನಂತಾಯ ಶಿವಶಂಕರ ಭಟ್ ಅವರಿಗೆ ಪುತ್ತೂರು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯ ಶುಕ್ರವಾರ ವಾರಂಟ್ ಜಾರಿಗೊಳಿಸಿದೆ.
ಪ್ರಕರಣದ ಇನ್ನೋರ್ವ ಆರೋಪಿ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗೆ ಸಮನ್ಸ್ ಜಾರಿಗೊಳಿಸಿದೆ.
ಪ್ರಕರಣದ ವಿಚಾರಣೆಯನ್ನು ಅ. 31ರಂದು ನಡೆಸಲಿದ್ದು, ಆ ದಿನ ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ. ಶ್ಯಾಮ್ ಪ್ರಸಾದ್ ಶಾಸ್ತ್ರಿ ರಾಘವೇಶ್ವರ ಸ್ವಾಮೀಜಿ ವಿರುದ್ಧ ಅತ್ಯಾಚಾರದ ಆರೋಪ ಮಾಡಿರುವ ಮಹಿಳೆಯ ಮೈದುನ. ಅವರು 2014ರ ಆಗಸ್ಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪುತ್ತೂರು ನಗರ ಠಾಣೆಗೆ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು.
ನಂತರದ ಬೆಳವಣಿಗೆಯಲ್ಲಿ ಸಿಐಡಿ ಪೊಲೀಸರು ತನಿಖೆಯನ್ನು ಮುಂದುವರಿಸಿ, ಸೆ. 26ರಂದು ಅಂತಿಮ ದೋಷಾರೋಪಣಾ ಪಟ್ಟಿಯನ್ನು ಪುತ್ತೂರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದರಲ್ಲಿರುವಂತೆ ರಾಘವೇಶ್ವರ ಭಾರತೀ ಸ್ವಾಮೀಜಿ, ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಬೋನಂತಾಯ ಶಿವಶಂಕರ ಭಟ್ ಅವರು ಆತ್ಮಹತ್ಯೆಗೆ ಪ್ರೇರಣೆ ನೀಡಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಇದೀಗ ವಾರಂಟ್ ಹಾಗೂ ಸಮನ್ಸ್ ಜಾರಿ ಮಾಡಿ ಆದೇಶಿಸಿದೆ.





