ವಿವಿಧೆಡೆ ಏಕಕಾಲಕ್ಕೆ ಎಸಿಬಿ ದಾಳಿ: ನಗದು, ಕೋಟ್ಯಂತರ ರೂ. ಮೌಲ್ಯದ ದಾಖಲೆಗಳ ಜಪ್ತಿ

ಬೆಂಗಳೂರು, ಅ.5: ಆದಾಯಕ್ಕಿಂತ ಅಧಿಕ ಸಂಪತ್ತು ಗಳಿಕೆ ಆರೋಪ ಕೇಳಿಬಂದ ಬೆನ್ನಲ್ಲೇ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಇಬ್ಬರು ಸರಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿ ಸೇರಿದಂತೆ 8 ಸ್ಥಳಗಳ ಮೇಲೆ ದಾಳಿ ನಡೆಸಿ ನಗದು ಹಾಗೂ ಕೋಟ್ಯಂತರ ಮೌಲ್ಯದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.
ಶುಕ್ರವಾರ ಬೆಳಗ್ಗೆ ಏಕಕಾಲದಲ್ಲಿ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮ(ಕೆಐಎಡಿಬಿ)ದ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್.ಸ್ವಾಮಿ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಎಂಜಿನಿಯರ್ ಅಧಿಕಾರಿ ಎನ್.ಜಿ.ಗೌಡಯ್ಯ ಮನೆ ಮೇಲೆ ದಾಳಿ ನಡೆಸಿದ್ದಾರೆ.
ದಾಳಿ ಏಲ್ಲೆಲ್ಲಿ?: ಟಿ.ಆರ್.ಸ್ವಾಮಿಯ ಬೆಂಗಳೂರಿನ ಮಲ್ಲೇಶ್ವರದ ಗ್ರೀನ್ಸ್ ಅಪಾರ್ಟ್‌ಮೆಂಟ್, ಅವರ ಇಬ್ಬರು ಸಂಬಂಧಿಕರ ಮನೆ ಮತ್ತು ಕಾರ್ಯ ನಿರ್ವಹಿಸುತ್ತಿರುವ ಕೆಐಎಡಿಬಿ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಎನ್.ಜಿ. ಗೌಡಯ್ಯರ ಬೆಂಗಳೂರಿನ ವಾಸದ ಮನೆ, ನಗರದ ಸಂಬಂಧಿಕರ ಮನೆ, ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಮನೆ ಹಾಗೂ ಕಾರ್ಯ ನಿರ್ವಹಿಸುತ್ತಿರುವ ಬಿಡಿಎ ಕಚೇರಿ ಮೇಲೆ ದಾಳಿ ನಡೆಸಿ ಕೋಟ್ಯಂತರ ನಗದು ಹಾಗೂ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಚ್ಚಿಬಿದ್ದ ಎಸಿಬಿ: ಸ್ವಾಮಿ ಅವರ ಮನೆ ಮತ್ತು ಕಚೇರಿಯ ಮೇಲೆ 20ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ 2 ಸಾವಿರ ರೂ., 500 ರೂ. ಮತ್ತು 200 ರೂ. ಮುಖಬೆಲೆಯ 4.5 ಕೋಟಿಗೂ ಅಧಿಕ ನಗದು ಪತ್ತೆಯಾಗಿದ್ದು, ಎಸಿಬಿ ತನಿಖಾಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.
ಅಷ್ಟೇ ಅಲ್ಲದೆ, ಕೋಟ್ಯಂತರ ಮೌಲ್ಯದ ಮಹತ್ವದ ದಾಖಲೆಗಳು, 30 ಲಕ್ಷ ಬೆಲೆ ಬಾಳುವ ಕಾರು ಸೇರಿ ಒಟ್ಟು ಮೂರು ಐಷಾರಾಮಿ ಕಾರುಗಳು ಪತ್ತೆಯಾಗಿವೆ. ಮಂತ್ರಿಮಾಲ್ ಗ್ರೀನ್ ಅಪಾರ್ಟ್‌ಮೆಂಟ್‌ನ ಬೇಸ್‌ಮೆಂಟ್‌ನಲ್ಲಿದ್ದ ಓಮಿನಿ ಕಾರ್‌ನಲ್ಲಿ ರಾಶಿ, ರಾಶಿ ಕಡತಗಳು ಪತ್ತೆಯಾಗಿದ್ದು, ಇದರಲ್ಲಿ ಅಕ್ರಮ ದಾಖಲಾತಿಗಳನ್ನು ಅಡಗಿಸಿಟ್ಟಿರುವ ಶಂಕೆ ಎಸಿಬಿಗೆ ಬಂದಿದೆ.
ಎಲ್ಲರಿಗೂ ಅಪಾರ್ಟ್‌ಮೆಂಟ್: ಸ್ವಾಮಿ 1405 ಸಂಖ್ಯೆಯ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರೆ ಆತನ ಸಹೋದರಿ 1504 ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದಾರೆ. ಕೋಟಿ ಕೋಟಿ ಹಣ ಸಿಕ್ಕ ಹಿನ್ನೆಲೆಯಲ್ಲಿ ಎರಡು ಮನೆಗಳಿಗೂ ಒಟ್ಟು ಮೂರು ಹಣ ಎಣಿಕೆಯ ಯಂತ್ರವನ್ನು ತಂದು ದೊರೆತ ಮೊತ್ತವನ್ನು ಲೆಕ್ಕ ಹಾಕಲಾಯಿತು.
ಕಂಜೂಸ್ ಬಳಿ ಕೋಟಿ ಕೋಟಿ: ಅಧಿಕಾರಿ ಸ್ವಾಮಿ ಅಪಾರ್ಟಮೆಂಟ್‌ನಲ್ಲಿರುವ ಕಾರ್ಮಿಕರಿಗೆ ಬಿಡಿಗಾಸು ನೀಡುತ್ತಿರಲಿಲ್ಲ. ಮನೆ ಸ್ವಚ್ಛಗೊಳಿಸಿದ ಕಾರ್ಮಿಕರು ಹಣ ಕೇಳಿದರೆ ಚೌಕಾಸಿ ಮಾಡುತ್ತಿದ್ದನಂತೆ. ಮನೆಗೆ ಬಂದ ಕೆಲಸಗಾರರಿಗೆ ಒಂದು ಕಪ್ ಟೀ ಕೂಡಾ ನೀಡುತ್ತಿರಲಿಲ್ಲವಂತೆ. ಇದರಿಂದ ಅಪಾರ್ಟ್‌ಮೆಂಟ್ ಸಿಬ್ಬಂದಿ ಸಾಕಷ್ಟು ನೊಂದಿದ್ದರು ಎನ್ನಲಾಗಿದೆ.
ಐಜಿಪಿ ಭೇಟಿ
ಕೆಐಎಡಿಬಿ ಅಧಿಕಾರಿ ಟಿ.ಆರ್.ಸ್ವಾಮಿ ನಿವಾಸಕ್ಕೆ ಎಸಿಬಿ ಐಜಿಪಿ ಚಂದ್ರಶೇಖರ್ ಭೇಟಿ ನೀಡಿದ್ದಾರೆ. ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಮನೆಯಿಂದ ಚೀಲ ಎಸೆದಿದ್ದಾರೆ ಎನ್ನುವ ಕುರಿತು ಮತ್ತಷ್ಟು ಪರಿಶೀಲನೆ ನಡೆಸುತ್ತಿದೆ ಎಂದು ಎಸಿಬಿ ಐಜಿಪಿ ಚಂದ್ರಶೇಖರ್ ತಿಳಿಸಿದ್ದಾರೆ.
ಗೌಡಯ್ಯ ಮನೆಯಲ್ಲಿ ಸಿಕ್ಕಿದ್ದು ಎಷ್ಟು?
ಎನ್.ಜಿ ಗೌಡಯ್ಯ ಅವರ ಕುಟುಂಬಸ್ಥರ ಹೆಸರಿನಲ್ಲಿ 2 ಮನೆ, 8 ನಿವೇಶನಗಳು, 14 ಅರ್ಪಾಟ್‌ಮೆಂಟ್‌ಗಳು, ಚಿನ್ನ 3 ಕೆಜಿ, ಬೆಳ್ಳಿ 10 ಕೆಜಿ, 3 ಕಾರು, 3 ಬೈಕ್, 75 ಲಕ್ಷ ನಗದು ಹಾಗೂ ವಿವಿಧ ಬ್ಯಾಂಕ್‌ಗಳಲ್ಲಿ 30 ಲಕ್ಷ ಠೇವಣಿ. ಜೊತೆಗೆ ಅವರ ಮಾವನ ಮನೆಯಲ್ಲಿ 4.5 ಕೆಜಿ ಚಿನ್ನಾಭರಣಗಳು ಪತ್ತೆಯಾಗಿವೆ ಎಂದು ಎಸಿಬಿ ಅಧಿಕೃತ ಮೂಲಗಳು ತಿಳಿಸಿವೆ.
ನೋಟುಗಳ ರಾಶಿ?
ಟಿ.ಆರ್. ಸ್ವಾಮಿ ಅವರ ಕುಟುಂಬಸ್ಥರ ಮತ್ತು ಸಂಬಂಧಿಕರ ಹೆಸರಿನಲ್ಲಿ 8 ಮನೆ, 10 ನಿವೇಶನಗಳು, ವಿವಿಧೆಡೆ 10 ಎಕರೆ ಕೃಷಿ ಭೂಮಿ, 1.6 ಕೆಜಿ ಚಿನ್ನ, 3 ಕಾರು, 2 ಸಾವಿರ ರೂ. ಮುಖಬೆಲೆ ನೋಟುಗಳು ಸೇರಿದಂತೆ 4 ಕೋಟಿ 52 ಲಕ್ಷ ನಗದು ರಾಶಿ ಪತ್ತೆಯಾಗಿದೆ.







