ಗಾಂಧಿ ಫೋಟೋ ಪ್ರದರ್ಶನದಲ್ಲಿ ಜಿನ್ನಾ ಫೋಟೋ: ನೋಟಿಸ್ ಜಾರಿ

ಆಗ್ರಾ, ಅ.5: ಆಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯ(ಆಮು)ದ ವಾಚನಾಲಯದಲ್ಲಿ ಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾದ ಫೋಟೋ ಪ್ರದರ್ಶನದಲ್ಲಿ ಮುಹಮ್ಮದ್ ಅಲಿ ಜಿನ್ನಾ ಫೋಟೋ ಇರಿಸಿದ್ದ ಹಿನ್ನೆಲೆಯಲ್ಲಿ ಲೈಬ್ರೇರಿಯನ್‌ಗೆ ನೋಟಿಸ್ ಜಾರಿಗೊಳಿಸಲಾಗಿದೆ.
ವಿವಿಯ ಕೇಂದ್ರ ಲೈಬ್ರರಿಯಲ್ಲಿ ನಡೆದಿದ್ದ ಈ ಪ್ರದರ್ಶನದಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಇತರ ನಾಯಕರ ಫೋಟೋದ ಜೊತೆ ಪಾಕಿಸ್ತಾನದ ಜನಕ ಜಿನ್ನಾರ ಫೋಟೋ ಇರಿಸಲಾಗಿದ್ದ ಹಿನ್ನೆಲೆಯಲ್ಲಿ ನೋಟಿಸ್ ಜಾರಿಗೊಳಿಸಿರುವುದಾಗಿ ವಿವಿಯ ಆಡಳಿತ ವರ್ಗ ತಿಳಿಸಿದೆ. ಗಾಂಧಿ ಜಯಂತಿಯಂದು ಪ್ರತೀ ವರ್ಷ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿದ್ದು ಕೇಂದ್ರ ಲೈಬ್ರೆರಿಯಲ್ಲಿ ಗಾಂಧೀಜಿಯವರಿಗೆ ಸಂಬಂಧಿಸಿದ ಪುಸ್ತಕ ಹಾಗೂ ಛಾಯಾಚಿತ್ರ ಪ್ರದರ್ಶಿಸಲಾಗುತ್ತದೆ. ವಿವಿ ಆಡಳಿತ ಫೋಟೋಗಳನ್ನು ಆಯ್ಕೆ ಮಾಡಿಲ್ಲ. ಆದ್ದರಿಂದ ಈ ಹಿಂದಿನ ವಿವಾದಗಳ ಹಿನ್ನೆಲೆಯಲ್ಲಿ ಲೈಬ್ರೇರಿಯನ್ ಡಾ ಅಮ್ಜದ್ ಅಲಿ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದ್ದು, ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದು ಮೂರು ದಿನದ ಒಳಗೆ ಉತ್ತರಿಸುವಂತೆ ಸೂಚಿಸಲಾಗಿದೆ ಎಂದು ವಿವಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಶಫಿ ಕಿದ್ವಾಯಿ ತಿಳಿಸಿದ್ದಾರೆ.





