ಸಾಲದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ

ಹೊಸದಿಲ್ಲಿ,ಅ.5: ಶುಕ್ರವಾರ ಅಚ್ಚರಿಯ ನಡೆಯೊಂದರಲ್ಲಿ ಆರ್‌ಬಿಐ ತಾನು ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ ರೆಪೊದಲ್ಲಿ ಯಾವುದೇ ಬದಲಾವಣೆಯನ್ನು ಮಾಡದೇ ಶೇ.6.5ರಲ್ಲಿಯೇ ಉಳಿಸಿಕೊಂಡಿದೆ. ಆರ್‌ಬಿಐ ವಾಣಿಜ್ಯ ಬ್ಯಾಂಕುಗಳಿಂದ ಪಡೆದುಕೊಳ್ಳುವ ಸಾಲಗಳ ಮೇಲಿನ ಬಡ್ಡಿದರ ರಿವರ್ಸ್ ರೆಪೊದಲ್ಲಿಯೂ ಯಾವುದೇ ಬದಲಾವಣೆಯ ಗೋಜಿಗೆ ಹೋಗದೆ ಶೇ.6.25ರಲ್ಲಿಯೇ ಉಳಿಸಿಕೊಳ್ಳಲಾಗಿದೆ.
ಆರ್‌ಬಿಐ ತನ್ನ ದ್ವೈವಾರ್ಷಿಕ ಹಣಕಾಸು ಪರಾಮರ್ಶೆ ನೀತಿಯಲ್ಲಿ ರೆಪೊ ದರವನ್ನು 25 ಮೂಲಾಂಶಗಳಷ್ಟು ಹೆಚ್ಚಿಸಲಿದೆ ಎಂಬ ವ್ಯಾಪಕ ನಿರೀಕ್ಷೆಗಳು ಹುಸಿಯಾದ ಬೆನ್ನಲ್ಲೇ ಅಮೆರಿಕದ ಡಾಲರ್‌ನೆದುರು ರೂಪಾಯಿ ಮೊದಲ ಬಾರಿಗೆ 74ರ ಗಡಿಯನ್ನೂ ದಾಟಿ ಕುಸಿದಿತ್ತು.
2019,ಮಾರ್ಚ್‌ಗೆ ಕೊನೆಗೊಳ್ಳುವ ಹಣಕಾಸು ವರ್ಷಕ್ಕೆ ಶೇ.7.4ರ ದರದಲ್ಲಿ ಜಿಡಿಪಿ ಬೆಳವಣಿಗೆ ಅಂದಾಜಿನಲ್ಲಿ ಯಾವುದೇ ಬದಲಾವಣೆಯನ್ನು ಆರ್‌ಬಿಐ ಮಾಡಿಲ್ಲ. ಸಮಿತಿಯ ಆರು ಸದಸ್ಯರ ಪೈಕಿ ಐವರು ಸಾಲದರಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದಿರುವ ನಿರ್ಧಾರಕ್ಕೆ ಒಲವು ವ್ಯಕ್ತಪಡಿಸಿದ್ದರು.
ತೈಲಬೆಲೆಗಳ ಏರಿಕೆ,ರೂಪಾಯಿಯ ತೀವ್ರ ಅಪವೌಲ್ಯ ಮತ್ತು ದ್ರವ್ಯತೆ ಕುರಿತು ಕಳವಳಗಳ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಿನಲ್ಲಿ ಆರ್‌ಬಿಐ ದರಗಳನ್ನ ಹೆಚ್ಚಿಸುವ ನಿರೀಕ್ಷೆ ಹೆಚ್ಚಿನ ಕಾವು ಪಡೆದುಕೊಂಡಿತ್ತು. ಹೆಚ್ಚಿನ ಆರ್ಥಿಕತಜ್ಞರು ಆರ್‌ಬಿಐ ದರಗಳನ್ನು ಹೆಚ್ಚಿಸಲಿದೆ ಎಂದು ಭವಿಷ್ಯ ನುಡಿದಿದ್ದರು.
ರೂಪಾಯಿ ಭರದಿಂದ ಕುಸಿಯುತ್ತಿರುವುದರಿಂದ ಮುಖ್ಯ ದರಗಳಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ಆರ್‌ಬಿಐ ನಿರ್ಧಾರ ಅಪಾಯಕಾರಿಯಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾರುಕಟ್ಟೆಯು ದರ ಏರಿಕೆಯ ನಿರೀಕ್ಷೆಯಲ್ಲಿದ್ದಾಗ ಆರ್‌ಬಿಐನ ಈ ಕ್ರಮವು ಅಪಾಯಕಾರಿಯಾಗಿದೆ. ಪರಿಣಾಮವಾಗಿ ಕರೆನ್ಸಿ ಮತ್ತು ಅಸೆಟ್ ಮಾರುಕಟ್ಟೆಗಳು ಇನ್ನಷ್ಟು ಕುಸಿಯಬಹುದು. ಹಣದುಬ್ಬರ ಗುರಿಗಳ ಮೇಲೆ ಹೆಚ್ಚಿನ ಗಮನ ಹರಿಸದಿರುವದು ಹಣಕಾಸು ಬಿಕ್ಕಟ್ಟನ ಮಧ್ಯೆ ಬಹುಶಃ ಅಪೇಕ್ಷಣೀಯವಲ್ಲ. ಆರ್‌ಬಿಐ ತನ್ನ ನಿಲುವನ್ನು ತಟಸ್ಥಕ್ಕೆ ಬದಲಿಸಿಕೊಂಡಿರುವುದು ಮುಂಬರುವ ತಿಂಗಳುಗಳಲ್ಲಿ ದರ ಏರಿಕೆಯಾಗಬಹುದು ಎನ್ನುವುದನ್ನು ಸೂಚಿಸುತ್ತಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕಿನ ಮುಖ್ಯಆರ್ಥಿಕ ತಜ್ಞ ಅಭೀಕ್ ಬರುವಾ ಹೇಳಿದರು.







