ಅತಿ ಹಗುರ ವಿಮಾನ ಪತನ
ಲಕ್ನೋ, ಅ. 5: ಭಾರತೀಯ ವಾಯು ಪಡೆಯ ಎರಡು ಸೀಟುಗಳ ಅತಿ ಹಗುರ ವಿಮಾನ ಉತ್ತರಪ್ರದೇಶದ ಬಾಗ್ಪತ್ ಜಿಲ್ಲೆಯಲ್ಲಿ ಶುಕ್ರವಾರ ಪತನಗೊಂಡಿದೆ. ಆದರೆ, ಇಬ್ಬರು ಪೈಲೆಟ್‌ಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಂಎಲ್-13 ಅತಿ ಹಗುರ ವಿಮಾನ ಗಾಝಿಯಾಬಾದ್‌ನ ಹಿಂಡನ್ ವಾಯು ನೆಲೆಯಿಂದ ಹಾರಾಟ ಆರಂಭಿಸಿತ್ತು. ಅದು ವಾಯು ಪಡೆ ದಿನಾಚರಣೆಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಹಾರಾಟದ ಅಭ್ಯಾಸದಲ್ಲಿ ನಿರತವಾಗಿತ್ತು ಎಂದು ಅವರು ತಿಳಿಸಿದ್ದಾರೆ. ಈ ಘಟನೆ ಬಿನೌಲಿ ಪ್ರದೇಶದ ರಾಂಚಡ್‌ನಲ್ಲಿ ಬೆಳಗ್ಗೆ 10 ಗಂಟೆಗೆ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ. ವಿಮಾನದ ಮೂಗಿಗೆ ಹೊರತುಪಡಿಸಿ ಬೇರೆ ಯಾವುದೇ ಹಾನಿ ಉಂಟಾಗಿಲ್ಲ ಎಂದು ಜಿಲ್ಲಾ ದಂಡಾಧಿಕಾರಿ ರಿಶಿರೇಂದ್ರ ಕುಮಾರ್ ತಿಳಿಸಿದ್ದಾರೆ. ‘‘ವಿಮಾನ ಮೂತಿ ಕೆಳಗಾಗಿ ಪತನಗೊಂಡಿತು ಹಾಗೂ ಮರಗಳ ನಡುವೆ ತಲೆ ಕೆಳಗಾಗಿ ಸಿಕ್ಕಿ ಹಾಕಿಕೊಂಡಿತು. ಐಎಎಫ್ ಅಧಿಕಾರಿಗಳು ಘಟನಾ ಸ್ಥಳದಲ್ಲಿ ನನ್ನೊಂದಿಗೆ ಇದ್ದಾರೆ. ಅವರು ಅಗತ್ಯದ ಕ್ರಮಗಳನ್ನು ಕೈಗೊಂಡಿದ್ದಾರೆ’’ ಎಂದು ಅವರು ತಿಳಿಸಿದ್ದಾರೆ.





