ಜಿಮ್ನಾಸ್ಟಿಕ್ ತರಬೇತುದಾರ ಚಂದ್ರಶೇಖರ್ ವರ್ಗಾವಣೆಗೆ ವಿರೋಧ
ಬೆಂಗಳೂರು, ಅ.5: ಜಿಮ್ನಾಸ್ಟಿಕ್ ತರಬೇತುದಾರ ಚಂದ್ರಶೇಖರ್‌ರನ್ನು ಕೊಲ್ಕತ್ತಾಗೆ ವರ್ಗಾವಣೆ ಮಾಡುವುದನ್ನು ತಡೆದು, ಬೆಂಗಳೂರಿಗೆ ವಾಪಸ್ಸು ಕಳುಹಿಸಬೇಕು ಎಂದು ಬೆಂಗಳೂರು ಜಿಮ್ನಾಸ್ಟಿಕ್ ಕ್ರೀಡಾಪಟು ಪೋಷಕರ ಸಂಘ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಸದಸ್ಯ ಎಚ್.ಆರ್.ಲೋಕೇಶ್, ಜಿಮ್ನಾಸ್ಟಿಕ್ ಸ್ಪರ್ಧಿ ಶ್ರೀವರ್ಷಿಣಿಗೆ ವಿಶೇಷವಾದ ತರಬೇತಿ ನೀಡಿಲ್ಲ ಎಂಬ ಕಾರಣಕ್ಕಾಗಿ ಆಕೆಯ ಪೋಷಕರು ಜಿಮ್ನಾಸ್ಟಿಕ್ ತರಬೇತುದಾರ ಚಂದ್ರಶೇಖರ್ ಅವರನ್ನು ಕೊಲ್ಕತ್ತಾಗೆ ವರ್ಗಾವಣೆ ಮಾಡಿಸಿದ್ದಾರೆ. ಇದರಿಂದಾಗಿ ಅವರ ಬಳಿ ಕಲಿಯುತ್ತಿದ್ದ ಉಳಿದ ಜಿಮ್ನಾಸ್ಟಿಕ್ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು.
ದಕ್ಷಿಣ ಭಾರತದಲ್ಲಿಯೇ ಚಂದ್ರಶೇಖರ್ ಅತ್ಯುತ್ತಮ ತರಬೇತುದಾರ. ಹೀಗಾಗಿ, ಭಾರತೀಯ ಕ್ರೀಡಾ ಪ್ರಾಧಿಕಾರ ಅವರನ್ನು ಕೋಲ್ಕತ್ತಾಗೆ ವರ್ಗಾವಣೆ ಮಾಡುವುದನ್ನು ತಡೆಯಬೇಕು. ಮರಳಿ ಬೆಂಗಳೂರಿಗೆ ವರ್ಗಾಯಿಸಬೇಕು ಎಂದು ಮನವಿ ಮಾಡಿದರು.
ಚಂದ್ರಶೇಖರ ಅವರ ಬಳಿ ತರಬೇತಿ ಪಡೆಯುತ್ತಿದ್ದ ಶ್ರೀವರ್ಷಿಣಿ ರಾಷ್ಟ್ರಮಟ್ಟದಲ್ಲಿ ಬೆಳ್ಳಿ ಪದಕ ಗಳಿಸಿದ ನಂತರ ತನಗೆ ವಿಶೇಷವಾದ ತರಬೇತಿ ನೀಡುವಂತೆ ಒತ್ತಾಯಿಸುತ್ತಾಳೆ. ಇದಕ್ಕೆ ಚಂದ್ರಶೇಖರ್ ಅವರು ಒಪ್ಪುವುದಿಲ್ಲ. ತರಬೇತಿ ಸಮಯದಲ್ಲಿ ಶ್ರೀವರ್ಷಿಣಿ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿರಲಿಲ್ಲ. ಈ ಬಗ್ಗೆ ಚಂದ್ರಶೇಖರ್ ಅವರು ಶ್ರೀವರ್ಷಿಣಿ ಹಾಗೂ ಆಕೆಯ ತಂದೆ ಶ್ರೀನಿವಾಸನ್ ಬಳಿ ವಿಚಾರಿಸಿದಾಗ ಅವರು ಜೋರು ದನಿಯಲ್ಲಿ ಕೂಗಾಡಿದ್ದಾರೆ. ಅಲ್ಲದೆ, ಆಕೆಯ ಪೋಷಕರು ಬೇರೆ ಜಿಮ್ನಾಸ್ಟಿಕ್ ತರಬೇತುದಾರರಿಂದ ಶ್ರಿವರ್ಷಿಣಿಗೆ ತರಬೇತಿ ಕೊಡಿಸಿದ್ದಾರೆ. ಆದರೆ, ಆಕೆಯ ಕ್ರೀಡಾಕ್ಷಮತೆ ಕುಗ್ಗಿದ್ದರ ಪರಿಣಾಮದಿಂದಾಗಿ ಸಮಾಜದಲ್ಲಿ ಪ್ರಭಾವ ಹೊಂದಿರುವ ಶ್ರೀನಿವಾಸನ್ ಜಿಮ್ನಾಸ್ಟಿಕ್ ತರಬೇತುದಾರ ಚಂದ್ರಶೇಖರ್ ಅವರನ್ನು ಕೋಲ್ಕತ್ತಾಗೆ ವರ್ಗಾವಣೆ ಮಾಡಿಸಿದ್ದಾರೆ ಎಂದು ದೂರಿದರು.
ಕಳೆದ 25 ವರ್ಷಗಳಿಂದ ಚಂದ್ರಶೇಖರ್ ರಾಷ್ಟ್ರ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದ ಜಿಮ್ನಾಸ್ಟಿಕ್ ಸ್ಪರ್ಧಿಗಳಿಗೆ ತರಬೇತಿ ನೀಡಿದ್ದಾರೆ. ಕಳೆದ 7 ವರ್ಷಗಳಿಂದ ಕುವೆಂಪು ಒಳಾಂಗಣ ಕ್ರೀಡಾಂಗಣದಲ್ಲಿ ಬೆಂಗಳೂರಿನ ಅಭ್ಯರ್ಥಿಗಳಿಗೆ ತರಬೇತಿ ನೀಡುತ್ತಿದ್ದರು. ತೀರಾ ಕಳಪೆಯಾಗಿದ್ದ ಬೆಂಗಳೂರು ಜಿಮ್ನಾಸ್ಟಿಕ್ ತಂಡವನ್ನು ಉತ್ತುಂಗಕ್ಕೆ ತಂದ ಕೀರ್ತಿ ಚಂದ್ರಶೇಖರ್ ಅವರದ್ದಾಗಿದೆ ಎಂದು ಬಣ್ಣಿಸಿದರು.







