ಸುರಕ್ಷಿತವಾಗಿ ಧರೆಗೆ ಮರಳಿದ 3 ಗಗನಯಾತ್ರಿಗಳು

ಮಾಸ್ಕೊ, ಅ. 5: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 197 ದಿನಗಳ ಕಾಲ ವೈಜ್ಞಾನಿಕ ಸಂಶೋಧನೆ ನಡೆಸಿದ ಬಳಿಕ, ಇಬ್ಬರು ‘ನಾಸಾ’ ಗಗನಯಾತ್ರಿಗಳು ಮತ್ತು ರಶ್ಯದ ಬಾಹ್ಯಾಕಾಶ ಸಂಸ್ಥೆ ‘ರಾಸ್ಕೋಸ್ಮೋಸ್’ನ ಓರ್ವ ಗಗನಯಾನಿ ಭೂಮಿಗೆ ಸುರಕ್ಷಿತವಾಗಿ ಮರಳಿದ್ದಾರೆ.
‘ಎಕ್ಸ್‌ಪೆಡಿಶನ್ 56’ ಯೋಜನೆಯ ಸಿಬ್ಬಂದಿಯಾಗಿದ್ದ ನಾಸಾ ಯಾತ್ರಿಗಳಾದ ಡ್ರೂ ಫ್ಯೂಸ್ಟಲ್ ಮತ್ತು ರಿಕಿ ಅರ್ನಾಲ್ಡ್ ಹಾಗೂ ರಶ್ಯದ ಒಲೆಗ್ ಆರ್ಟಮ್ಯೆವ್ ಸೋಯಝ್ ಎಂಎಸ್-08 ಬಾಹ್ಯಾಕಾಶ ನೌಕೆಯಲ್ಲಿ ಕಝಖ್‌ಸ್ತಾನದ ಜೆಝ್‌ಕಾಝ್ಗನ್ ಪಟ್ಟಣದಲ್ಲಿ ಸ್ಥಳೀಯ ಸಮಯ ಗುರುವಾರ ಸಂಜೆ 5:44ಕ್ಕೆ ಬಂದಿಳಿದರು.
ಅವರು ಕೆಳಗಿನ ಭೂಕಕ್ಷೆಯಲ್ಲಿ ವೈಜ್ಞಾನಿಕ ಸಂಶೋಧನೆಗೆ ಬೆಂಬಲ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಕಕ್ಷೆಯಲ್ಲಿ ಸುತ್ತುವ ಪ್ರಯೋಗಾಲಯವು ಪೂರ್ಣ ಪ್ರಮಾಣದಲ್ಲಿ ಚಾಲನಾ ಸ್ಥಿತಿಯಲ್ಲಿ ಇರುವಂತೆ ನೋಡಿಕೊಂಡಿದ್ದರು ಹಾಗೂ ಮೂರು ಬಾಹ್ಯಾಕಾಶ ನಡಿಗೆಯಲ್ಲಿ ಪಾಲ್ಗೊಂಡಿದ್ದರು.
Next Story





