ಕೇರಳ ಅಲಪ್ಪುಝ ತೆಂಗು ನಾರಿನ ಘಟಕಕ್ಕೆ ಸಚಿವ ಶ್ರೀನಿವಾಸ್ ನೇತೃತ್ವದ ತಂಡ ಭೇಟಿ
ಬೆಂಗಳೂರು, ಅ.5: ರಾಜ್ಯದಲ್ಲಿ ತೆಂಗಿನ ನಾರಿನ ಉದ್ಯಮವನ್ನು ಬೃಹತ್ ಪ್ರಮಾಣದಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಣ್ಣ ಕೈಗಾರಿಕೆಗಳ ಸಚಿವ ಎಸ್.ಆರ್. ಶ್ರೀನಿವಾಸ್ ನೇತೃತ್ವದ ತಂಡ ಕೇರಳದ ಅಲಪ್ಪುಝ ತೆಂಗಿನ ನಾರಿನ ಘಟಕಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿತು.
ತೆಂಗಿನ ನಾರಿನ ವೈವಿಧ್ಯಮಯ ಉತ್ಪನ್ನಗಳನ್ನು ಉತ್ಪಾದಿಸುವಲ್ಲಿ ಕೇರಳ ಮುಂಚೂಣಿಯಲ್ಲಿದೆ. ವಿದ್ಯಾವಂತ ನಿರುದ್ಯೊಗಿಗಳಿಗೆ ಸ್ಥಳೀಯವಾಗಿಯೆ ಉದ್ಯೋಗ ದೊರಕಿಸಿ ಕೊಡುವಲ್ಲಿ ಉದ್ದಿಮೆ ಮಹತ್ವ ಪಡೆದುಕೊಂಡಿದೆ. ಇಲ್ಲಿ ಉತ್ಪಾದಿಸಲ್ಪಡುವ ತೆಂಗಿನ ನಾರಿನ ಉತ್ಪನ್ನಗಳಿಗೆ ಇತರ ರಾಜ್ಯಗಳಲ್ಲೂ ಬೇಡಿಕೆ ಇದ್ದು, ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವಲ್ಲಿ ಕೇರಳ ಯಶಸ್ವಿಯಾಗಿದೆ ಎಂದು ಶ್ರೀನಿವಾಸ್ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಲ್ಲೂರಿಂಗ್ ಮಶಿನ್, ಸ್ಕ್ರೀನರ್ ಎಲೆಕ್ಟ್ರಾನಿಕ್ ಯಾರ್ಟ್, ಡಿಫೈಬ್ರಿಂಗ್ ಮೆಶಿನ್, ಹೈಡ್ರಾಲಿಕ್ ಬೆಲಿಂಗ್ ಪ್ರೆಸ್ ಸೇರಿ ವಿವಿಧ ಘಟಕಗಳಿಗೆ ಸಚಿವರ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕೇರಳ ತೆಂಗಿನ ನಾರಿನ ಮಹಾಮಂಡಳಿಯ ಅಧ್ಯಕ್ಷ ಕೆ.ಪ್ರಸಾದ್, ವ್ಯವಸ್ಥಾಪಕ ನಿರ್ದೇಶಕ ಪಿ.ವಿ.ಸಸೀಂದ್ರನ್ ಮಾಹಿತಿ ನೀಡಿದರು.
ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಸಿ.ಎನ್.ಬಾಲಕೃಷ್ಣ, ಮಾಜಿ ಶಾಸಕ ಎಚ್. ನಿಂಗಪ್ಪ, ಸಚಿವರ ಆಪ್ತ ಕಾರ್ಯದರ್ಶಿ ಡಾ.ಕೆ.ಮುರಳೀಧರ್, ಕರ್ನಾಟಕ ರಾಜ್ಯ ತೆಂಗಿನ ನಾರಿನ ಮಹಾಮಂಡಳಿ ಅಧ್ಯಕ್ಷ ಎಂ.ಕೆ.ಪುಟ್ಟರಾಜು, ವ್ಯವಸ್ಥಾಪಕ ನಿರ್ದೇಶಕ ಡಾ.ಅರುಣ್ ಕುಮಾರ್, ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕುಮಾರಸ್ವಾಮಿ, ಇಲಾಖೆ ಜಂಟಿ ನಿರ್ದೇಶಕ ಎಚ್.ಎಸ್.ಜೈಕುಮಾರ್ ತಂಡದಲ್ಲಿದ್ದರು.







