ಮೈಸೂರು: ಸಚಿವರ ಮಾತಿಗೂ ಬಗ್ಗದ ಪೌರಕಾರ್ಮಿಕರು; ಮೂರನೇ ದಿನಕ್ಕೆ ಕಾಲಿಟ್ಟ ಮುಷ್ಕರ

ಮೈಸೂರು,ಅ.5: ತಮ್ಮ ಬೇಡಿಕೆಗಳಿಗೆ ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ರಸ್ತೆ ಮಧ್ಯೆ ಕಸ ಸುರಿದು ಪ್ರತಿಭಟನೆ ನಡೆಸುತ್ತಿದ್ದ ಮೈಸೂರು ಮಹಾನಗರ ಪಾಲಿಕೆ ಪೌರಕಾರ್ಮಿಕರಿಗೆ ಸಮಸ್ಯೆ ಬಗೆಹರಿಸುವ ಭರವಸೆಯನ್ನು ಸಮ್ಮಿಶ್ರ ಸರ್ಕಾರದ ಸಚಿವರು ನೀಡಿ ಸಂಧಾನಕ್ಕೆ ಮುಂದಾದರು. ಆದರೆ ಪ್ರತಿಭಟನಾಕಾರರು ಮತ್ತು ಸಚಿವರ ನಡುವಿನ ಮಾತುಕತೆ ವಿಫಲಗೊಂಡು ಪ್ರತಿಭಟನಾಕಾರರು ತಮ್ಮ ಅನಿರ್ದಿಷ್ಟಾವಧಿ ಮುಷ್ಕರವನ್ನು ಮುಂದುವರೆಸಿದರು.
ಮೈಸೂರು ಮಹಾನಗರ ಪಾಲಿಕೆ ಕಚೇರಿ ನಡೆಯುತ್ತಿರುವ ಪೌರ ಕಾರ್ಮಿಕರ ಅನಿರ್ದಿಷ್ಟಾವಧಿ ಧರಣಿ ಶುಕ್ರವಾರವು ಸಹ ಮುಂದುವರಿಯಿತು. ಸ್ಥಳಕ್ಕೆ ಆಗಮಿಸಿದ ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಅವರು, ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಭರವಸೆಗೆ ಒಪ್ಪದ ಪೌರ ಕಾರ್ಮಿಕರು ಸ್ಥಳದಲ್ಲೇ ಸಮಸ್ಯೆ ಬಗೆ ಹರಿಸುವಂತೆ ಪಟ್ಟುಹಿಡಿದರು. ಈ ವೇಳೆ ಮಾತನಾಡಿದ ಸಚಿವ ಸಾ.ರಾ ಮಹೇಶ್, ನಾಡಹಬ್ಬ ದಸರಾಗೆ ಬೆಂಬಲ ಕೊಡಿ. ಮುಖ್ಯಮಂತ್ರಿಗಳ ಪ್ರತಿನಿಧಿಯಾಗಿ ನಾವು ಇಲ್ಲಿಗೆ ಬಂದಿದ್ದೇವೆ. ಈ ವಿಚಾರ ನಿನ್ನೆ ಕ್ಯಾಬಿನೆಟ್ ನಲ್ಲಿ ಚರ್ಚೆ ಆಗಿದೆ. ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ ಎಂದು ತಿಳಿಸಿದರಾದರೂ, ಅದಕ್ಕೆ ಪ್ರತಿಭಟನಾಕಾರರು ಒಪ್ಪಲಿಲ್ಲ.
ಇದೇ ವೇಳೆ ಸಚಿವ ಜಿ.ಟಿ ದೇವೇಗೌಡ ಸಹ ಪ್ರತಿಭಟನಾ ನಿರತರಿಗೆ ಮನವಿ ಮಾಡಿದರು. ಪ್ರತಿಭಟನೆ ವೇಳೆ ಕೂಗಾಡಿದ್ದಕ್ಕೆ ಗರಂ ಆದರು. ಅಲ್ಲದೆ ಪ್ರತಿಭಟನೆ ಕೈಬಿಡುವಂತೆ ತಿಳಿಸಿದರು. ಆದರೆ ಇದಕ್ಕೆ ಬಗ್ಗದ ಪ್ರತಿಭಟನಾಕಾರರು ಸ್ಥಳದಲ್ಲೇ ಸಮಸ್ಯೆ ಬಗೆಹರಿಸಿ ಎಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದರು.





