ಮೈಸೂರು: ರಾಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಅವ್ಯವಹಾರ ಆರೋಪ; ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಮೈಸೂರು,ಅ.5: ರಾಫೆಲ್ ಯುದ್ಧ ವಿಮಾನದ ಭಾರೀ ಹಗರಣದ ನಡೆದಿದೆ ಎಂದು ಆರೋಪಿಸಿ ಮೋದಿ ಸರ್ಕಾರದ ವಿರುದ್ಧ ಮೈಸೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನಾ ರ್ಯಾಲಿ ನಡೆಯಿತು.
ಮೈಸೂರು ನಗರದ ಕಾಂಗ್ರೆಸ್ ಭವನದಿಂದ ಶುಕ್ರವಾರ ಹೊರಟ ರ್ಯಾಲಿ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಪ್ರತಿಭಟನೆ ನಡೆಸಿತು. ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೇಳಿ ಬಂತು. ಈ ಸಂದರ್ಭ ಮಾತನಾಡಿದ ಶಾಸಕ ತನ್ವೀರ್ ಸೇಠ್, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ರಾಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಭಾರೀ ಹಗರಣ ನಡೆಸಿದೆ. ಈ ಕುರಿತು ವಿವರ ಕೇಳಿದರೆ ನೀಡುತ್ತಿಲ್ಲ. ಪ್ರಧಾನಿ ಮೋದಿ ಜನರಿಗೆ ಅಚ್ಛೆ ದಿನ್ ಬರುತ್ತಿದೆ ಎಂದು ಹೇಳಿ ವಂಚಿಸುತ್ತಲೇ ಬಂದಿದ್ದಾರೆ ಎಂದು ಆರೋಪಿಸಿದರು.
ಸಂಸದ ಆರ್.ಧ್ರುವನಾರಾಯಣ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಅದಾನಿ, ಅಂಬಾನಿ, ಮಲ್ಯ ಅಂತಹವರನ್ನು ರಕ್ಷಿಸುವುದು ಬಿಟ್ಟರೆ ಬೇರೇನೂ ಇಲ್ಲ. ಸಾವಿರಾರು ಕೋಟಿ ಲೂಟಿ ಹೊಡೆದು ವಂಚನೆ ಮಾಡಿರುವುದು ಬಿಟ್ಟರೆ ಇವರ ಸಾಧನೆ ಇಲ್ಲ. ಇಂತಹ ದೊಡ್ಡ ದೊಡ್ಡ ಕುಳಗಳಿಗೆ ಮೋದಿ ಬೆನ್ನಲುಬಾಗಿ ನಿಂತಿದ್ದಾರೆ. ಲೋಕಸಭೆಯಲ್ಲಿ ಇದರ ಬಗ್ಗೆ ಒಂದೇ ಒಂದು ಮಾತುಗಳನ್ನು ಪ್ರಧಾನಿಯವರು ಆಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಬಾರಿ ಅವ್ಯವಹಾರ ನಡೆಸಿದ್ದು, ಈ ಬಗ್ಗೆ ಕೂಡ ಪ್ರಧಾನಿಗಳು ಮೌನವಹಿಸಿದ್ದಾರೆ. ನೋಟು ಅಮಾನ್ಯೀಕರಣಗೊಳಿಸಿ ಬಡವರು ಮಧ್ಯಮವರ್ಗವರಿಗೆ ಸಾಕಷ್ಟು ತೊಂದರೆ ನೀಡಿದರು. ನೋಟು ಅಮಾನ್ಯೀಕರಣದಿಂದ ಜನ ಇನ್ನು ಹೊರಬಂದಿಲ್ಲ. ಒಂದಿಲ್ಲೊಂದು ಸಮಸ್ಯೆಗಳಿಂದ ದಿನನಿತ್ಯ ಬಳಲುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಮಾಜಿ ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್, ಜಿ.ಪಂ.ಸದಸ್ಯೆ ಡಾ.ಪುಷ್ಪ ಅಮರ್ ನಾಥ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕಾಂಗ್ರೆಸ್ ಮುಖಂಡರಾದ ಸುನೀಲ್ ಬೋಸ್, ರವಿ, ಡಿ.ನಾಗಭೂಷಣ್, ಸುರೇಶ್, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.







