ಹನೂರು: ದುಶ್ಚಟಗಳ ಬಗ್ಗೆ ಜನಜಾಗೃತಿ ಕಾರ್ಯಕ್ರಮ

ಹನೂರು,ಅ.5: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಜನರಲ್ಲಿ ಧಾರ್ಮಿಕ ಭಾವನೆ ಬೆಳೆಸುವುದರ ಜತೆಗೆ ತರಬೇತಿಗಳನ್ನು ನೀಡಿ ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡುತ್ತದೆ ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು.
ಪಟ್ಟಣದ ಆರ್‍ಎಂಸಿ ಸಭಾಂಗಣದಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘದ ವತಿಯಿಂದ ಆಯೋಜಿಸಿದ್ದ ಸತ್ಯನಾರಾಯಣ ಪೂಜೆ ಹಾಗೂ ದುಶ್ಚಟದ ಅರಿವಿನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಜನರಲ್ಲಿ ಧಾರ್ಮಿಕ ಭಾವನೆ ಬೆಳೆಸಲು ತಾಲೂಕುಗಳಲ್ಲಿ ಸತ್ಯನಾರಾಯಣಾ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಜತೆಗೆ ರೈತರು ಕೃಷಿಯಲ್ಲಿ ಅಭಿವೃದ್ಧಿ ಹೊಂದಲು ವಿಚಾರ ಸಂಕಿರಣ ಹಾಗೂ ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಹಲವು ಕೌಶಲ್ಯಾಧಾರಿಯ ತರಬೇತಿಗಳನ್ನು ನೀಡುತ್ತಿದ್ದು, ಕ್ಷೇತ್ರದ ಜನರ ಅಭಿವೃದ್ಧಿಗೆ ಸಂಸ್ಥೆಯು ಹೆಚ್ಚಿನ ಒತ್ತು ನೀಡುತ್ತಿದೆ ಎಂದು ತಿಳಿಸಿದರು.
ದುಶ್ಚಟಗಳನ್ನು ಬಿಡಿ: ಇತ್ತೀಚಿನ ದಿನಗಳಲ್ಲಿ ಪುರುಷರು ಮದ್ಯ ಸೇವನೆ ಹಾಗೂ ಇನ್ನಿತರೆ ದುಶ್ಚಟಗಳಿಗೆ ದಾಸ್ಯರಾಗುತ್ತಿದ್ದಾರೆ. ಇದರಿಂದ ಕುಟುಂಬದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಸಮಾಜದ ಸ್ವಾಸ್ಥ್ಯ ಹದಗೆಡುತ್ತಿದೆ. ಈ ದಿಸೆಯಲ್ಲಿ ಧರ್ಮಸ್ಥಳ ಸಂಸ್ಥೆಯು ದುಶ್ಚಟಗಳ ಪರಿಣಾಮದ ಬಗ್ಗೆ ಜನರಲ್ಲಿ ಅರಿವು ಮೂಢಿಸುತ್ತಿರುವುದು ಉತ್ತಮ ಸಮಾಜದ ನಿರ್ಮಾಣಕ್ಕೆ ಸಹಕಾರಿ. ಆದುದರಿಂದ ಪುರುಷರು ದುಶ್ಚಟಗಳನ್ನು ಬಿಟ್ಟು ಉತ್ತಮ ಸಾಂಸಾರಿಕ ಜೀವನ ನಡೆಸಬೇಕು ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ದುಶ್ಚಟಗಳ ಜಾಗೃತಿ ಕಾರ್ಯಕ್ರಮಕ್ಕೆ ಇನ್ಸ್‍ಪೆಕ್ಟರ್ ಚಾಲನೆ ನೀಡಿದರು. ಬಳಿಕ ಸಂಘದ ಸದಸ್ಯರು ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನದಿಂದ ಮೆರವಣಿಗೆ ಹೊರಟು ಮುಖ್ಯರಸ್ತೆಯಲ್ಲಿ ಘೋಷಣೆ ಕೂಗುತ್ತಾ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷೆ ಶಿವಮ್ಮ, ತಾಪಂ ಅಧ್ಯಕ್ಷ ಆರ್.ರಾಜು, ಸದಸ್ಯ ಜವಾದ್ ಆಹಮದ್, ಉಪಾಧ್ಯಕ್ಷೆ ಲತಾ, ಪಪಂ ಅಧ್ಯಕ್ಷೆ ಮಮತಾ, ವಕೀಲ ಡಿ. ವೆಂಕಟಾಚಲ, ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕ ಸತೀಶ್‍ಶೆಟ್ಟಿ, ತಾಲೂಕು ಯೋಜನಾಧಿಕಾರಿ ಪುರುಷೋತ್ತಮ್, ಕೃಷಿ ಅಧಿಕಾರಿ ಚಿದಾನಂದ್, ಕೃಷಿ ಪ್ರಬಂಧಕ ಪ್ರದೀಪ್, ವಲಯ ಮೇಲ್ವಿಚಾರಕ ಬಾಲಕೃಷ್ಣ ಹಾಗೂ ಒಕ್ಕೂಟದ ಪದಾಧಿಕಾರಿಗಳು ಹಾಜರಿದ್ದರು.







