ದೋಷಪೂರಿತ ಹಿಪ್ ಇಂಪ್ಲಾಂಟ್: ಕೇಂದ್ರದಿಂದ ಪ್ರತಿಕ್ರಿಯೆ ಕೋರಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಅ. 5: ಬಹುರಾಷ್ಟ್ರೀಯ ಕಂಪೆನಿ ಪೂರೈಸಿದ ದೋಷಪೂರಿತ ಹಿಪ್ (ಸೊಂಟ) ಇಂಪ್ಲಾಟೇಶ್ ಅನ್ನು 15,820 ಜನರಿಗೆ ಮಾಡಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಮನವಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಶುಕ್ರವಾರ ನಿರ್ದೇಶಿಸಿದೆ.
ಹಿಪ್ (ಸೊಂಟ) ಬದಲಿ ಶಸ್ತ್ರಚಿಕಿತ್ಸೆಗೆ ದೋಷಪೂರಿತ ಇಂಪ್ಲಾಂಟ್‌ಗಳನ್ನು ಬಳಸಲಾಗಿದೆ ಎಂದು ಆರೋಪಿಸಿ ಅರುಣ್ ಕುಮಾರ್ ಗೋಯೆಂಕಾ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆಗೆ ಪ್ರತಿಕ್ರಿಯೆ ನೀಡುವಂತೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ಕೇಂದ್ರ ಸರಕಾರಕ್ಕೆ ಸೂಚಿಸಿದೆ. ದೋಷಪೂರಿತ ಇಂಪ್ಲಾಂಟ್‌ಗಳನ್ನು ಹಿಂದೆ ಪಡೆಯುವ ಕುರಿತು ದೇಶಾದ್ಯಂತ ಜಾಹೀರಾತು ನೀಡುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಅರುಣ್ ಕುಮಾರ್ ಗೋಯೆಂಕಾ ಅವರು ಹಿರಿಯ ವಕೀಲ ಸಲ್ಮಾನ್ ಖುರ್ಷಿದ್ ಮೂಲಕ ಮನವಿ ಸಲ್ಲಿಸಿದ್ದರು.
ಪ್ರಮಾಣ ಪತ್ರ ನೀಡಿದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ. ಬಹುರಾಷ್ಟ್ರೀಯ ಕಂಪೆನಿ ಯಾವುದೇ ಕ್ಲಿನಿಕಲ್ ಪರೀಕ್ಷೆ ನಡೆಸದೆ ದೋಷಪೂರಿತ ಉತ್ಪಾದನೆಯನ್ನು ಮಾರಾಟ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ. ಇಂಪ್ಲಾಂಟ್‌ಗಳ ವಿರುದ್ಧ ತತ್‌ಕ್ಷಣ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲು ವಿಶೇಷ ತನಿಖಾ ತಂಡ ನಿಯೋಜಿಸಬೇಕು ಎಂದು ಮನವಿಯಲ್ಲಿ ಕೇಂದ್ರವನ್ನು ಆಗ್ರಹಿಸಲಾಗಿದೆ.





