ಭಾರತದಲ್ಲಿ ಮೂಲಭೂತವಾದ ಹರಡಲು ಅವಕಾಶ ನೀಡದ ಮುಸ್ಲಿಮರನ್ನು ಅಭಿನಂದಿಸಬೇಕು: ರಾಜನಾಥ್ ಸಿಂಗ್

ಹೊಸದಿಲ್ಲಿ, ಅ. 5: ಕಾಶ್ಮೀರದ ವಿಷಯದಲ್ಲಿ ‘ದುಷ್ಟ ಸಂಚಿ’ನಿಂದ ಹಿಂದೆ ಸರಿಯದ ಪಾಕಿಸ್ಥಾನವನ್ನು ಖಂಡಿಸಿರುವ ಕೇಂದ್ರ ಸಚಿವ ರಾಜನಾಥ್ ಸಿಂಗ್, ನಿರಂತರ ಬ್ರೈನ್ ವಾಶ್‌ನ ಹೊರತಾಗಿಯೂ ಭಾರತದಲ್ಲಿ ಮೂಲಭೂತವಾದ ಹರಡದ ಮುಸ್ಲಿಮರನ್ನು ಅಭಿನಂದಿಸಬೇಕು ಎಂದಿದ್ದಾರೆ.
ಹಿಂದೂಸ್ಥಾನ್ ಟೈಮ್ಸ್‌ನ 16ನೇ ಲೀಡರ್‌ಶಿಪ್ ಶೃಂಗದಲ್ಲಿ ಮಾತನಾಡಿದ ಸಿಂಗ್, ಭಯೋತ್ಪಾದನೆ ಮಾನವತೆಯ ವಿರುದ್ಧದ ಅಪರಾಧ. ಅದನ್ನು ಯಾವುದೇ ಜಾತಿ ಅಥವಾ ಧರ್ಮದೊಂದಿಗೆ ಜೋಡಿಸಲು ಸಾಧ್ಯವಿಲ್ಲ. ಇಸ್ಲಾಮಿಕ್ ರಾಷ್ಟ್ರಗಳು ಕೂಡ ಭಯೋತ್ಪಾದನೆಯನ್ನು ಖಂಡಿಸುತ್ತವೆ. ಭಯೋತ್ಪಾದನೆಯನ್ನು ನಿಲ್ಲಿಸಲು ಪಾಕಿಸ್ಥಾನ ಪ್ರಯತ್ನಿಸಬೇಕು. ದೇಶದಲ್ಲಿ ಮೂಲಭೂತವಾದ ಹರಡಲು ಅವಕಾಶ ನೀಡದ ಮುಸ್ಲಿಮರನ್ನು ಅಭಿನಂದಿಸಬೇಕು ಎಂದರು. ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಸಿಂಗ್ ಹೇಳಿದರು. ಆದರೆ, ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ಈಗಲೂ ತೊಡಗಿಕೊಂಡಿರುವ ಪಾಕಿಸ್ತಾನದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಒಬ್ಬರಲ್ಲ, ಪ್ರತಿ ಪ್ರಧಾನಿ ಕೂಡ ಪಾಕಿಸ್ಥಾನದೊಂದಿಗಿನ ಬಾಂಧವ್ಯ ಸುಧಾರಿಸಲು ಪ್ರಯತ್ನಿಸಿದರು. ಆದರೆ, ಪಾಕಿಸ್ಥಾನ ಭಯೋತ್ಪಾದಕರನ್ನು ಭಾರತದ ಒಳಗಡೆ ಕಳುಹಿಸುವ ಕೆಲಸವನ್ನು ಮುಂದುವರಿಸಿದೆ. ಇದು ವಾಸ್ತವ ಎಂದು ಅವರು ಹೇಳಿದರು. ಕಾಶ್ಮೀರದ ಈಗಿನ ಸ್ಥಿತಿ ಈ ಹಿಂದಿಗಿಂತ ಉತ್ತಮವಾಗಿದೆ. ಭಯೋತ್ಪಾದನೆ ಸಂಬಂಧಿತ ಘಟನೆಗಳಲ್ಲಿ ಇಳಿಕೆಯಾಗಿದೆ. 1995ರಲ್ಲಿ 6,000 ಭಯೋತ್ಪಾದನೆ ಘಟನೆಗಳು ನಡೆದಿದ್ದರೆ, 2017ರಲ್ಲಿ ಕೇವಲ 360 ಭಯೋತ್ಪಾದನೆ ಘಟನೆಗಳು ನಡೆದಿವೆ ಎಂದು ಅವರು ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿ ಮೊದಲ ಗುಂಡು ಹಾರಿಸುವುದಿಲ್ಲ. ಪಾಕಿಸ್ತಾನದ ಕಡೆಯಿಂದ ಯಾವುದೇ ಪ್ರಚೋದನೆ ಸಿಕ್ಕಿದರೆ, ಅನಂತರ ಪ್ರತಿದಾಳಿಯಲ್ಲಿ ಹಾರಿಸುವ ಗುಂಡು ಯೋಧರ ಲೆಕ್ಕಕ್ಕೇ ಸಿಗುವುದಿಲ್ಲ ಎಂದು ಸಿಂಗ್ ಹೇಳಿದರು.







