ವಾಯುಭಾರ ಕುಸಿತ: ಶಿವಮೊಗ್ಗದ ಹಲವೆಡೆ ಮಳೆ

ಸಾಂದರ್ಭಿಕ ಚಿತ್ರ
ಶಿವಮೊಗ್ಗ, ಅ. 5: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮದಿಂದ ಶುಕ್ರವಾರ ಸಂಜೆ ಶಿವಮೊಗ್ಗ ನಗರದ ಹಲವೆಡೆ ಧಾರಾಕಾರ ವರ್ಷಧಾರೆಯಾಯಿತು.
ಬೆಳಿಗ್ಗೆಯಿಂದಲೇ ನಗರದಲ್ಲಿ ಮೋಡ ಕವಿದ ವಾತಾವರಣವಿತ್ತು. ಆದರೆ ಮಳೆ ಮೋಡ ಮರೆಯಾಗಿ ಬಿಸಿಲು ಬೀಳಲಾರಂಭಿಸಿತ್ತು. ಆದರೆ ಸಂಜೆ ದಿಢೀರ್ ಆಗಿ ಆಕಾಶದಲ್ಲಿ ಕಪ್ಪು ಮೋಡಗಳು ದಟ್ಟೈಸಿ, ಹಲವೆಡೆ ಉತ್ತಮ ಮಳೆಯಾಯಿತು.
ನಗರದ ಹಲವೆಡೆ ರಸ್ತೆಗಳಲ್ಲಿ ಬಿದ್ದಿರುವ ಗುಂಡಿ-ಗೊಟರುಗಳಲ್ಲಿ ಮಳೆ ನೀರು ತುಂಬಿಕೊಂಡ ಕಾರಣದಿಂದ, ಸುಗಮ ವಾಹನ ಸಂಚಾರಕ್ಕೆ ತೀವ್ರ ಅಡೆತಡೆ ಉಂಟಾಗಿತ್ತು. ಗುಂಡಿ ಮುಚ್ಚಲು ಮಹಾನಗರ ಪಾಲಿಕೆ ಆಡಳಿತ ಸೂಕ್ತ ಕ್ರಮಕೈಗೊಳ್ಳದಿರುವುದಕ್ಕೆ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದುದು ಕಂಡುಬಂದಿತು.
ವರ್ಷಧಾರೆ: ಕಳೆದ ಕೆಲ ದಿನಗಳ ಹಿಂದೆ ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಕಾರಣದಿಂದ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆಯಾಗಿತ್ತು. ಇದೀಗ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಕೆಲವೆಡೆ ವರ್ಷಧಾರೆಯಾಗುತ್ತಿದೆ. ಬಿಸಿಲ ಬೇಗೆಯಿಂದ ಕಂಗೆಟ್ಟಿರುವ ನಾಗರೀಕರಿಗೆ ಮಳೆಯು ನಿರಾಳತೆಯ ಭಾವ ಉಂಟು ಮಾಡಿದೆ.





